ಅವೈಜ್ಞಾನಿಕ ಚರಂಡಿ ನಿರ್ಮಾಣ: ಪೊಸೋಟು ಕುಟುಂಬಕ್ಕೆ ನಿಲ್ಲದ ಸಂಕಷ್ಟ – ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ಆಕ್ರೋಶ

​ಮಂಜೇಶ್ವರ: ನೂತನವಾಗಿ ನಿರ್ಮಿಸಲಾದ ಪಟ್ಪಥ ರಾಷ್ಟ್ರೀಯ ಹೆದ್ದಾರಿಯ ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿಯಿಂದಾಗಿ, ಕಳೆದ ಮೂರು ವರ್ಷಗಳಿಂದ ಪೊಸೋಟು ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆ ಬದಿಯಲ್ಲಿರುವ ಕುಟುಂಬವೊಂದು ತೀವ್ರ ಸಂಕಷ್ಟ ಎದುರಿಸುತ್ತಿದೆ.

​ಸಮೀಪದ ಗೋವಿಂದ ಪೈ ಕಾಲೇಜು, ಅದರ ತಳಭಾಗ ಸೇರಿದಂತೆ ನಾಲ್ಕೂ ದಿಕ್ಕುಗಳಿಂದ ಹರಿದುಬರುವ ಮಳೆ ನೀರು ಹಾಗೂ ತ್ಯಾಜ್ಯ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಈ ಸಮಸ್ಯೆಗೆ ಮೂಲ ಕಾರಣವಾಗಿದೆ.

ನಿಯಮಾವಳಿಗಳಿಗೆ ವ್ಯತಿರಿಕ್ತವಾಗಿ ಹರಿದು ಬರುವ ಕಲುಷಿತ ನೀರು ನೇರವಾಗಿ ಸ್ಥಳೀಯ ನಿವಾಸಿ ಅಂದುಂಞಿ ಎಂಬುವರ ಮನೆಯ ಅಂಗಳಕ್ಕೆ ಹಾಗೂ ಮನೆ ಒಳಗೆ ನುಗ್ಗುತ್ತಿದ್ದು, ಕುಟುಂಬವು ನಿತ್ಯ ನರಕಯಾತನೆ ಅನುಭವಿಸುತ್ತಿದೆ.

ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸಂತ್ರಸ್ತ ಕುಟುಂಬವು ಸ್ಥಳೀಯ ಶಾಸಕರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳವರೆಗೂ ದೂರು ನೀಡಿದೆ. “ದೂರು ನೀಡದ ಸ್ಥಳವೇ ಇಲ್ಲ, ಆದರೆ ಈವರೆಗೆ ಯಾವುದೇ ಅಧಿಕಾರಿಯಾಗಲಿ, ಜನಪ್ರತಿನಿಧಿಯಾಗಲಿ ಸ್ಪಂದಿಸಿಲ್ಲ” ಎಂದು ಮನೆ ಯಜಮಾನ ಅಂದುಂಞಿ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

​ಕೇವಲ ಮಳೆಗಾಲದಲ್ಲಿ ಮಾತ್ರವಲ್ಲದೆ, ವರ್ಷಪೂರ್ತಿ ಸಮೀಪದ ಹೊಳೆಗೆ ಹರಿದು ಹೋಗಬೇಕಾದ ತ್ಯಾಜ್ಯ ನೀರಿಗೆ ಸರಿಯಾದ ಹರಿವಿನ ವ್ಯವಸ್ಥೆ ಇಲ್ಲದಿರುವುದರಿಂದ ಈ ನೀರೆಲ್ಲವೂ ಅಂದುಂಞಿ ಅವರ ಮನೆಯ ಅಂಗಳದಲ್ಲೇ ನಿಲ್ಲುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಉಂಟಾಗಿದ್ದು, ದುರ್ವಾಸನೆಯಿಂದ ಜೀವನ ನಡೆಸುವುದು ಕಷ್ಟಕರವಾಗಿದೆ.

​ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿದ ಗುತ್ತಿಗೆದಾರರ ವಿರುದ್ಧ ತಕ್ಷಣವೇ ಸೂಕ್ತ ಕ್ರಮ ಕೈಗೊಂಡು, ಸರ್ವೀಸ್ ರಸ್ತೆ ಬದಿಯಲ್ಲಿ ಸರಿಹೊಂದುವ ರೀತಿಯಲ್ಲಿ ಚರಂಡಿ ನಿರ್ಮಿಸಿ ಈ ಕುಟುಂಬಕ್ಕೆ ತಕ್ಷಣವೇ ನ್ಯಾಯ ಒದಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಅಧಿಕಾರಿಗಳು ಇನ್ನಾದರೂ ನಿದ್ರೆಯಿಂದ ಎದ್ದು ಈ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸಬೇಕಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!