ನ.27ರಿಂದ ಡಿ.1ರವರೆಗೆ ಚಾಮುಂಡಿಕುನ್ನು ಶ್ರೀ ವಿಷ್ಣು ಚಾಮುಂಡೇಶ್ವರಿ ದೇವಸ್ಥಾನದ ಕಳಿಯಾಟ ಮಹೋತ್ಸವ …. !

ಕಾಸರಗೋಡು, ಅ.6: ಬೇಕಲ್‌ಫೋರ್ಟ್ ಸಮೀಪದ ಚಾಮುಂಡಿಕುನ್ನು ಶ್ರೀ ವಿಷ್ಣು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಕಳಿಯಾಟ ಮಹೋತ್ಸವವು ನ.27ರಿಂದ ಡಿ.1ರವರೆಗೆ ಐದು ದಿನಗಳ ಕಾಲ ವಿವಿಧ ಧಾರ್ಮಿಕ, ದೈವಾರಾಧನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

ಶ್ರೀ ಬಾರಿಕ್ಕಾಟಪ್ಪನ್ ಅವರ ಅಮರ ಭೂಮಿಯೊಳಗೆ ಶ್ರೀ ಶಾಂತನಾಯಕರ್ ಅವರಿಂದ ಪ್ರತಿಷ್ಠಾಪಿತವಾದ ಶ್ರೀ ಬಾರಿಕ್ಕಾಟಪ್ಪನ್ ನಂದಾರ್ ದೀಪದಿಂದ ಉರಿಯುವ ಅನಶ್ವರ ದೀಪಪ್ರಭೆಯಿಂದ ಪರಿಧೀಪ್ತವಾಗಿರುವ ಚಾಮುಂಡಿಕುನ್ನು ಶ್ರೀ ವಿಷ್ಣು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಈ ಬಾರಿಯ ಕಳಿಯಾಟ ಮಹೋತ್ಸವವನ್ನು ಒಂದು ದಿನದ ಹರಕೆ ಕಳಿಯಾಟ ಸೇರಿದಂತೆ ಐದು ದಿನಗಳ ಕಾಲ ನಡೆಸಲು ತೀರ್ಮಾನಿಸಲಾಗಿದೆ. ಉತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿ-ದೇವರುಗಳ ಅನುಗ್ರಹಕ್ಕೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಸಮಿತಿ ಹಾಗೂ ಉತ್ಸವ ಸಮಿತಿ ಮನವಿ ಮಾಡಿದೆ.

ನ.27ರಂದು ಬೆಳಿಗ್ಗೆ 10 ಗಂಟೆಗೆ ಕ್ಷೇತ್ರ ವ್ಯಾಪ್ತಿಯ ಏಳು ಪ್ರಾದೇಶಿಕ ಸಮಿತಿಗಳ ನೇತೃತ್ವದಲ್ಲಿ ಉಗ್ರಾಣ ತುಂಬಿಸುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7 ಗಂಟೆಗೆ ಬಾರಿಕ್ಕಾಟಪ್ಪನ್ ಶ್ರೀ ಮಹಿಷಮರ್ಧಿನಿ ಕ್ಷೇತ್ರದಿಂದ ದೀಪ ಹಾಗೂ ಬತ್ತಿ ತರುವ ಮೂಲಕ ಉತ್ಸವಕ್ಕೆ ಚಾಲನೆ ದೊರೆಯಲಿದೆ. ರಾತ್ರಿ 8 ಗಂಟೆಗೆ ಶ್ರೀ ವಿಷ್ಣು ಚಾಮುಂಡೇಶ್ವರಿ ದೇವಸ್ಥಾನದ ಪ್ರಾದೇಶಿಕ ಮಾತೃ ಸಮಿತಿಯಿಂದ ‘ಕೈಕೊಟ್ಟಿಕಳಿ’ ನಡೆಯಲಿದೆ. ರಾತ್ರಿ 9 ಗಂಟೆಗೆ ಪೂಮಾರುತನ್ ದೈವದ ವೆಳ್ಳಾಟ ಹಾಗೂ ವಿಷ್ಣುಮೂರ್ತಿ, ರಕ್ತಚಾಮುಂಡಿ ಮತ್ತು ಭಗವತಿ ದೈವಗಳ ಕುಳಿಚ್ಚಾಟ ನಡೆಯಲಿದೆ.

ನ.28ರಂದು ಬೆಳಗ್ಗೆಯಿಂದ ಪೂಮಾರುತನ್, ರಕ್ತಚಾಮುಂಡಿ, ಭಗವತಿ ಹಾಗೂ ವಿಷ್ಣುಮೂರ್ತಿ ದೈವಗಳ ಕೋಲ ನಡೆಯಲಿದೆ. ಮಧ್ಯಾಹ್ನ 1ರಿಂದ 2.30ರವರೆಗೆ ಅನ್ನಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 8 ಗಂಟೆಗೆ ಮಡಿಯನ್ ಕಾನತ್ತಿಂಗಲ್ ಶ್ರೀ ವಯನಾಟು ಕುಲಪನ್ ದೈವಸ್ಥಾನದಿಂದ ‘ಉಲ್ಪೆ ಮೆರವಣಿಗೆ’ ಆರಂಭವಾಗಲಿದೆ. ಸಣ್ಣ ಬಾಲಕಿಯರ ತಾಲಪ್ಪೋಲಿ, ಮುತ್ತುಕೊಡೆ, ಸಿಂಗಾರಿ ಮೇಳ, ಪೂಕಾವಡಿ, ಕಾವಡಿಯಾಟ, ವಾದ್ಯಮೇಳ, ದೇವನೃತ್ಯ, ವಿವಿಧ ಕಲಾರೂಪಗಳು, ದೀಪಾಲಂಕಾರ ಹಾಗೂ ದೀಪನೃತ್ಯ ಸೇರಿದಂತೆ ವಿವಿಧ ಆಕರ್ಷಣೆಗಳು ಮೆರವಣಿಗೆಯಲ್ಲಿ ಇರಲಿವೆ. ರಾತ್ರಿ 10 ಗಂಟೆಗೆ ಪೂಮಾರುತನ್ ದೈವದ ವೆಳ್ಳಾಟ ಉಲ್ಪೆ ಮೆರವಣಿಗೆಯನ್ನು ಸ್ವೀಕರಿಸಲಿದೆ. ರಾತ್ರಿ 11 ಗಂಟೆಯಿಂದ ವಿಷ್ಣುಮೂರ್ತಿ, ರಕ್ತಚಾಮುಂಡಿ ಹಾಗೂ ಭಗವತಿ ದೈವಗಳ ಕುಳಿಚ್ಚಾಟ ನಡೆಯಲಿದೆ.

ನ.29ರಂದು ಬೆಳಗ್ಗೆಯಿಂದ ಪೂಮಾರುತನ್, ರಕ್ತಚಾಮುಂಡಿ, ಭಗವತಿ ಹಾಗೂ ವಿಷ್ಣುಮೂರ್ತಿ ದೈವಗಳ ಆರಾಧನೆ ನಡೆಯಲಿದೆ. ಮಧ್ಯಾಹ್ನ 1ರಿಂದ 2.30ರವರೆಗೆ ಅನ್ನಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 8 ಗಂಟೆಗೆ ಜಾನಪದ ಗೀತೆಯ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 10 ಗಂಟೆಯಿಂದ ಪೂಮಾರುತನ್ ದೈವದ ವೆಳ್ಳಾಟದೊಂದಿಗೆ ರಕ್ತಚಾಮುಂಡಿ, ಭಗವತಿ ಹಾಗೂ ವಿಷ್ಣುಮೂರ್ತಿ ದೈವಗಳ ಕುಳಿಚ್ಚಾಟ ನಡೆಯಲಿದೆ.

ನ.30ರಂದು ಬೆಳಗ್ಗೆಯಿಂದ ಪೂಮಾರುತನ್, ರಕ್ತಚಾಮುಂಡಿ, ಭಗವತಿ ಹಾಗೂ ವಿಷ್ಣುಮೂರ್ತಿ ದೈವಗಳ ಆರಾಧನೆ ನಡೆಯಲಿದೆ. ಮಧ್ಯಾಹ್ನ 1ರಿಂದ 2 ಗಂಟೆಯವರೆಗೆ ಅನ್ನಪ್ರಸಾದ ವಿತರಣೆ ನಡೆಯಲಿದೆ. ಸಂಜೆ 7 ಗಂಟೆಗೆ ಕ್ಷೇತ್ರ ವ್ಯಾಪ್ತಿಯಲ್ಲಿ 2026ನೇ ಸಾಲಿನ ವಿವಿಧ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಕಲಾ-ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಕ್ಷೇತ್ರ ಆಡಳಿತಾಧಿಕಾರಿಗಳ ವತಿಯಿಂದ ಬಹುಮಾನ ವಿತರಿಸಲಾಗುವುದು. ರಾತ್ರಿ 8 ಗಂಟೆಗೆ ಕ್ಷೇತ್ರ ವ್ಯಾಪ್ತಿಯ ಕಲಾಪ್ರತಿಭೆಗಳಿಂದ ‘ಕಲಾಸಂಧ್ಯಾ’ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10 ಗಂಟೆಯಿಂದ ಪೂಮಾರುತನ್ ದೈವದ ವೆಳ್ಳಾಟ ಹಾಗೂ ರಕ್ತಚಾಮುಂಡಿ, ಭಗವತಿ ಮತ್ತು ವಿಷ್ಣುಮೂರ್ತಿ ದೈವಗಳ ಕುಳಿಚ್ಚಾಟ ನಡೆಯಲಿದೆ.

ಡಿ.1ರಂದು ಬೆಳಗ್ಗೆಯಿಂದ ಪೂಮಾರುತನ್, ರಕ್ತಚಾಮುಂಡಿ ಹಾಗೂ ಭಗವತಿ ದೈವಗಳ ಆರಾಧನೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ವಿಷ್ಣುಮೂರ್ತಿ ದೈವದ ಆರಾಧನೆ ಆರಂಭವಾಗಲಿದ್ದು, 12.30ರಿಂದ ಅನ್ನಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಯಿಂದ ಪಡಿಞ್ಞನ್ಯಾರ್ ಚಾಮುಂಡಿ ಹಾಗೂ ಗುಳಿಗ ದೈವಗಳ ಆರಾಧನೆ ನಡೆಯಲಿದೆ.

ಸಂಜೆ 4 ಗಂಟೆಗೆ ಬಾರಿಕ್ಕಾಡಪ್ಪ ಶ್ರೀ ಮಹಿಷಮರ್ಧಿನಿ ಕ್ಷೇತ್ರ ಹಾಗೂ ನಾಯಕರ ಹಿತ್ತಿಲು ಶ್ರೀ ಮಲ್ಲಿಕಾರ್ಜುನ ಕ್ಷೇತ್ರಗಳಿಗೆ ವಿಷ್ಣುಮೂರ್ತಿ ದೈವದ ಪ್ರದಕ್ಷಿಣೆ ನಡೆಯಲಿದೆ. ಬಳಿಕ ತೆಂಗಿನಕಾಯಿ ಒಡೆಯುವ ಸೇವೆ ನೆರವೇರಲಿದೆ. ರಾತ್ರಿ ವಿಷ್ಣುಮೂರ್ತಿ ತಿರುಮುಡಿ ಇಳಿಯುವುದರೊಂದಿಗೆ ಐದು ದಿನಗಳ ಕಳಿಯಾಟ ಮಹೋತ್ಸವ ಸಮಾಪ್ತಿಯಾಗಲಿದೆ.

ಉತ್ಸವದ ಎಲ್ಲ ಧಾರ್ಮಿಕ, ದೈವಾರಾಧನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸುವಂತೆ ದೇವಸ್ಥಾನದ ಆಡಳಿತ ಸಮಿತಿ ಹಾಗೂ ಉತ್ಸವ ಸಮಿತಿ ಮನವಿ ಮಾಡಿದೆ.

SHARE
Loading spinner

One thought on “ನ.27ರಿಂದ ಡಿ.1ರವರೆಗೆ ಚಾಮುಂಡಿಕುನ್ನು ಶ್ರೀ ವಿಷ್ಣು ಚಾಮುಂಡೇಶ್ವರಿ ದೇವಸ್ಥಾನದ ಕಳಿಯಾಟ ಮಹೋತ್ಸವ …. !”

Leave a Reply

Your email address will not be published. Required fields are marked *

error: Content is protected !!