
ಕುಂಬಳೆ: ಸ್ತನಾರ್ಬುದದ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಅಕ್ಟೋಬರ್ 18ರಂದು ಸಂಜೆ 3 ಗಂಟೆಗೆ ಆರಿಕ್ಕಾಡಿ ನದಿತೀರದಲ್ಲಿ ಕಯಾಕಿಂಗ್ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಸಂಘಟಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸ್ತನಾರ್ಬುದ ತಡೆಗಟ್ಟುವಿಕೆ ಮತ್ತು ಜಾಗೃತಿಯ ಭಾಗವಾಗಿ FOGSI ಹಾಗೂ ಸ್ತನ ಆರೋಗ್ಯ ಸಮಿತಿಯ ನೇತೃತ್ವದಲ್ಲಿ “ಸ್ತನ ಆರೋಗ್ಯಕ್ಕಾಗಿ ಮುನ್ನಡೆಯುವ” ಎಂಬ ಸಂದೇಶದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಸ್ತನಾರ್ಬುದವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುವುದು, ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಪ್ರೋತ್ಸಾಹಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.

ಎ.ಕೆ.ಎಂ. ಅಶ್ರಫ್ ಶಾಸಕರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಉಷಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜನಪ್ರತಿನಿಧಿಗಳು ಹಾಗೂ ಆರೋಗ್ಯ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.


KOGS, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ವಿಮಾ ಕಾಸರಗೋಡು ಚಾಪ್ಟರ್, ಕುಂಭಳೆ ಗ್ರಾಮ ಪಂಚಾಯತ್ ಹಾಗೂ ಕೆಪಿಎಸ್ ಕಯಾಕಿಂಗ್ ಆರಿಕ್ಕಾಡಿ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.

ಸ್ತನಾರ್ಬುದವು ಮಹಿಳೆಯರ ಜೀವನವನ್ನು ನಿರ್ಧರಿಸಲು ಅವಕಾಶ ನೀಡಬಾರದು. ಜಾಗೃತಿ ಮತ್ತು ಆರಂಭಿಕ ರೋಗನಿರ್ಣಯದ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸಬೇಕು ಎಂದು ಸಂಘಟಕರು ತಿಳಿಸಿದ್ದಾರೆ. ಸಾರ್ವಜನಿಕರು ಹಾಗೂ ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್, ಡಾ. ಉಷಾ, ಪತ್ರಕರ್ತ ಕೆ.ಎಂ. ಅಬ್ಬಾಸ್ ಆರಿಕ್ಕಾಡಿ, ಉಪಾಧ್ಯಕ್ಷೆ ಬಲ್ಕೀಸ್, ಸ್ಥಾಯಿ ಸಮಿತಿ ಅಧ್ಯಕ್ಷ ಎ.ಕೆ. ಆರಿಫ್, ಕೆ.ಪಿ. ಮುನೀರ್ ಹಾಗೂ ಅಸ್ಮೀನಾ ಅಶ್ರಫ್ ಉಪಸ್ಥಿತಿ ಇದ್ದರು

