ಕಾಸರಗೋಡು : ರಾಜ್ಯದಲ್ಲಿ ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿ ಸರಣಿ ಅಪಘಾತ ಹಾಗೂ ಪ್ರಾಣಹಾನಿ ಉಂಟುಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕಾಸರಗೋಡು ಜಿಲ್ಲಾ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

ಬೈಕ್, ಸ್ಕೂಟರ್ ಹಾಗೂ ಕಾರುಗಳನ್ನು ಅಪ್ರಾಪ್ತ ಮಕ್ಕಳ ಕೈಗೆ ನೀಡಿದ ಪೋಷಕರು ಮತ್ತು ವಾಹನ ಮಾಲೀಕರ ವಿರುದ್ಧವೇ ಪ್ರಕರಣ ದಾಖಲಿಸುವ ಕಾರ್ಯಾಚರಣೆ ತೀವ್ರಗೊಂಡಿದೆ.
ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಪೋಷಕರ ವಿರುದ್ಧ ಕೇಸ್ ದಾಖಲಿಸಿ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಕುಂಬಳೆ ಪೊಲೀಸರು ಬಂದ್ಯೋಡು, ಆರಿಕ್ಕಾಡಿ ಹಾಗೂ ಬಾಡೂರು ನಿವಾಸಿಗಳ ವಿರುದ್ಧ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ಸ್ಕೂಟರ್ ಹಾಗೂ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಂತೆಯೇ 17 ವರ್ಷದ ಬಾಲಕನಿಗೆ ಕಾರು ನೀಡಿದ ಬೇಕಲದ ಮಹಿಳೆಯೊಬ್ಬರ ಮೇಲೆಯೂ ಬೇಕಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಿಯಮ ಮೀರಿ ಮಕ್ಕಳಿಗೆ ವಾಹನ ನೀಡಿದರೆ ಕಠಿಣ ಕಾನೂನು ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಸ್ಪಷ್ಟ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ.

