ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಜನ್ಮ ಶತಮಾನೋತ್ಸವ, ಶ್ರೀ ಸತ್ಯಸಾಯಿ ಪಾದುಕಾ ಪ್ರತಿಷ್ಠಾಪನೆ ಹಾಗೂ ಶಾಲಾ ವಾರ್ಷಿಕೋತ್ಸವ – ಪ್ರಶಾಂತಿ ಸಂಭ್ರಮ

ಬಾಯಾರಿನ ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಜನ್ಮಶತಮಾನೋತ್ಸವದ ಅಂಗವಾಗಿ, ಶ್ರೀ ಸತ್ಯಸಾಯಿ ಪಾದುಕಾ ಪ್ರತಿಷ್ಠಾಪನೆ ಹಾಗೂ ಶಾಲಾ ವಾರ್ಷಿಕೋತ್ಸವವನ್ನು ಒಳಗೊಂಡ “ಪ್ರಶಾಂತಿ ಸಂಭ್ರಮ”ವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಡಿಸೆಂಬರ್ 13ರ ಶನಿವಾರದಂದು, ಪುಟ್ಟಪರ್ತಿಯ ಶ್ರೀ ಸತ್ಯಸಾಯಿ ಬಾಬಾ ಆಶ್ರಮ – ಪ್ರಶಾಂತಿ ನಿಲಯಂನಿಂದ ಬಾಯಾರಿನ ಪ್ರಶಾಂತಿ ವಿದ್ಯಾಕೇಂದ್ರಕ್ಕೆ ಲಭಿಸಿದ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಅಮೃತಶಿಲಾ ಪಾದುಕೆಯ ಪ್ರತಿಷ್ಠಾಪನಾ ಕಾರ್ಯಕ್ರಮವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು. ಈ ಪಾದುಕಾ ಪ್ರತಿಷ್ಠಾಪನೆಯನ್ನು ಶ್ರೀ ಸತ್ಯಸಾಯಿ ಸೆಂಟ್ರಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿಯಾಗಿರುವ ಶ್ರೀ ಆರ್. ಜೆ. ರತ್ನಾಕರ್ ಅವರು ನೆರವೇರಿಸಿದರು.

ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯ ಮಹತ್ವವನ್ನು ವಿವರಿಸಿ, ಮಕ್ಕಳ ಬೆಳವಣಿಗೆಗಾಗಿ ಪೋಷಕರು ಪಡುವ ಶ್ರಮ ಮತ್ತು ತ್ಯಾಗವನ್ನು ಅರಿತು ಅವರಿಗೆ ಕೃತಜ್ಞತೆ ಸಲ್ಲಿಸುವುದು ಜೀವನದ ಶ್ರೇಷ್ಠ ಮೌಲ್ಯವೆಂದು ಒತ್ತಿ ಹೇಳಿದರು. ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಿರುವ ಪ್ರಶಾಂತಿ ವಿದ್ಯಾಕೇಂದ್ರದ ಪಾತ್ರ ಅತ್ಯಂತ ಮಹತ್ವದ್ದೆಂದು ತಿಳಿಸಿದರು. ಈ ಕಾರ್ಯಕ್ಕಾಗಿ ಶ್ರಮಿಸುತ್ತಿರುವ ಸಂಸ್ಥೆಯ ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆ, ಶಿಕ್ಷಕರ ಅಹರ್ನಿಶಿ ಪರಿಶ್ರಮ ಹಾಗೂ ವಿದ್ಯಾರ್ಥಿಗಳ ಶಿಸ್ತು ಮತ್ತು ಸಾಧನೆಗಳನ್ನು ಮನಪೂರ್ವಕವಾಗಿ ಪ್ರಶಂಸಿಸಿದರು.

ಕ್ರೀಡೆ, ವಿಜ್ಞಾನ ಮೇಳಗಳು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಾಂತಿ ವಿದ್ಯಾಕೇಂದ್ರ ಸಾಧಿಸಿರುವ ಯಶಸ್ಸನ್ನು ಉಲ್ಲೇಖಿಸಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ “ಪ್ರಶಾಂತಿ” ವಾರ್ಷಿಕ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.ಸಮಾರಂಭದಲ್ಲಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು, ಕರ್ನಾಟಕ ಉತ್ತರ ರಾಜ್ಯದ ಅಧ್ಯಕ್ಷರಾದ ಎಂ. ಪದ್ಮನಾಭ ಪೈ, ಶ್ರೀ ಸತ್ಯಸಾಯಿ ಟ್ರಸ್ಟ್ ಕರ್ನಾಟಕದ ಕನ್ವೀನರ್ ವಾಸುಕಿ ಬಿ.ಆರ್., ಟ್ರಸ್ಟಿಗಳಾದ ಅಶ್ವಿನ್ ರಾಮ್ ಕುಮಾರ್, ಪ್ರಶಾಂತಿ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷರಾದ ಪೆಲತಡ್ಕ ರಾಮಕೃಷ್ಣ ಭಟ್, ಮ್ಯಾನೇಜಿಂಗ್ ಟ್ರಸ್ಟ್‌ನ ಟ್ರಸ್ಟಿ ಹಿರಣ್ಯ ಮಹಾಲಿಂಗ ಭಟ್, ಪ್ರಾಂಶುಪಾಲರಾದ ವಾಮನನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.ಭಾನುವಾರ, 18 ದಂಪತಿಗಳಿಂದ ಅಷ್ಟಾವಧಾನ ಸಹಿತ ಶ್ರೀ ಸತ್ಯಸಾಯಿ ಪೂಜೆ ಜರುಗಿತು. ಜೊತೆಗೆ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

SHARE
Loading spinner

Leave a Reply

Your email address will not be published. Required fields are marked *

error: Content is protected !!