ಮಂಜೇಶ್ವರ: ತುಳುನಾಡಿನ ಪ್ರಸಿದ್ಧ ಹಾಗೂ ಪವಿತ್ರ ನಾಗಕ್ಷೇತ್ರಗಳಲ್ಲಿ ಒಂದಾದ ಐತಿಹಾಸಿಕ ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಾಲಯದಲ್ಲಿ ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ಅಧ್ಯಾತ್ಮಿಕ ಶ್ರದ್ಧೆ ಮತ್ತು ಸಡಗರದಿಂದ ಆಚರಿಸಲಾಯಿತು.


ಹದಿನೆಂಟು ಪೇಟೆಯ ದೇಗುಲವೆಂಬ ಖ್ಯಾತಿ ಪಡೆದಿರುವ ಇಲ್ಲಿ, ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯ ಈ ಪವಿತ್ರ ದಿನದಂದು ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಳಿಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ನಾಗದೇವ ಹಾಗೂ ಶೇಷಸಹಿತ ಅನಂತೇಶ್ವರನ ದರ್ಶನ ಪಡೆದು ಕೃತಾರ್ಥರಾದರು.


ನಾಗ ದೇವರಿಗೆ ಹಾಗೂ ಮೂಲರೂಪಿ ಅನಂತೇಶ್ವರನಿಗೆ ಕ್ಷೀರಾಭಿಷೇಕ ಮತ್ತು ಪಂಚಾಮೃತ ಅಭಿಷೇಕಗಳನ್ನು ವಿಧಿಪೂರ್ವಕವಾಗಿ ನೆರವೇರಿಸಲಾಯಿತು.
ನಾಗನ ಕಟ್ಟೆಯಲ್ಲಿ ಹಾಲು ಮತ್ತು ಎಳನೀರಿನ ಅಭಿಷೇಕದೊಂದಿಗೆ ವಿಶೇಷ ಧಾರ್ಮಿಕ ವಿಧಿಗಳು ಜರುಗಿದವು.
ಪೂಜೆಯ ಬಳಿಕ ನಾಗನ ಮೂರ್ತಿಗಳನ್ನು ವಿವಿಧ ತಳಿಯ ಹೂವುಗಳಿಂದ ಮನಮೋಹಕವಾಗಿ ಅಲಂಕರಿಸಲಾಗಿತ್ತು.

ಕ್ಷೇತ್ರದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಸಾಗಿದ ಈ ಧಾರ್ಮಿಕ ಕೈಂಕರ್ಯಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಾಗರಾಜನ ಕೃಪೆಗೆ ಪಾತ್ರರಾದರು.

