ಮಂಜೇಶ್ವರ: ಮನೆಯಲ್ಲಿದ್ದ ಟಿವಿ ಕೆಟ್ಟುಹೋಗಿದ್ದರಿಂದ ಉಂಟಾದ ಮನಸ್ಸಿನ ತಾಪದಿಂದ ಮಹಿಳೆಯೊಬ್ಬರು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಶಿಮಠ ಗುಡ್ಡೆಯಲ್ಲಿ ನಡೆದಿದೆ. ದಿವಂಗತ ಯೋಗೇಶ ಪ್ರಭು ಅವರ ಪತ್ನಿ ಸಾವಿತ್ರಿ ಪ್ರಭು (65) ಸಾವನ್ನಪ್ಪಿದ ದುರ್ದೈವಿ.

ಮಂಗಳವಾರ ರಾತ್ರಿ ಎಂದಿನಂತೆ ಊಟ ಮುಗಿಸಿ ಮಲಗಿದ್ದ ಸಾವಿತ್ರಿ ಪ್ರಭು ಅವರು, ಬುಧವಾರ ಮುಂಜಾನೆ ಮನೆಯ ಅಡುಗೆ ಕೋಣೆಯಲ್ಲಿ ಸುಟ್ಟಗಾಯಗಳೊಂದಿಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಗ ಗುರುಪ್ರಸಾದ್ ಪ್ರಭು ಅವರು ಬೆಳಿಗ್ಗೆ ಎದ್ದು ನೋಡಿದಾಗ, ತಾಯಿ ಅಡುಗೆ ಕೋಣೆಯ ಫೈಬರ್ ಕುರ್ಚಿಯಲ್ಲಿ ಕುಳಿತು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುವುದು ಕಂಡುಬಂದಿದೆ.ಮೃತದೇಹವು ಸುಟ್ಟ ಕುರ್ಚಿಯ ಅವಶೇಷಗಳೊಂದಿಗೆ ನೆಲದ ಮೇಲೆ ಬಿದ್ದಿದ್ದ ಸ್ಥಿತಿಯಲ್ಲಿತ್ತು.

ಸಾವಿತ್ರಿ ಅವರು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಎದ್ದು ಟಿವಿ ನೋಡುವ ಅಭ್ಯಾಸ ಹೊಂದಿದ್ದರು ಎಂದು ಮಗ ಗುರುಪ್ರಸಾದ್ ತಿಳಿಸಿದ್ದಾರೆ. ಆದರೆ, ಟಿವಿ ಕೆಟ್ಟುಹೋಗಿದ್ದರಿಂದ ಅದನ್ನು ರಿಪೇರಿಗೆ ನೀಡಲಾಗಿತ್ತು. ಇಂದು ರಿಪೇರಿ ಮಾಡಿ ಟಿವಿಯನ್ನು ವಾಪಸ್ ತರುವುದಾಗಿ ತಿಳಿಸಲಾಗಿತ್ತು. ಮನೆಯಲ್ಲಿ ಟಿವಿ ಇಲ್ಲದ ಕಾರಣ ಸಾವಿತ್ರಿ ಅವರು ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎಂದು ಮಗ ಹೇಳಿದ್ದಾರೆ.
ಈ ಕುರಿತು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.


