ಮಂಜೇಶ್ವರ: ಕನ್ಸ್ಯೂಮರ್ ಫೆಡ್ ಹಾಗೂ ಮಂಜೇಶ್ವರ ಸಹಕಾರಿ ಬ್ಯಾಂಕಿನ ಸಂಯುಕ್ತಾಶ್ರಯದಲ್ಲಿ ಮಂಜೇಶ್ವರದ ಎಂ.ಕೆ. ಫಾತಿಮಾ ಕಾಂಪ್ಲೆಕ್ಸ್‌ನಲ್ಲಿ ಓಣಂ ಸಹಕಾರಿ ಮಾರುಕಟ್ಟೆಗೆ ಸಂಭ್ರಮದ ಚಾಲನೆ ದೊರಕಿತು.

ಬುಧವಾರ ಬೆಳಿಗ್ಗೆ ಬ್ಯಾಂಕ್ ಅಧ್ಯಕ್ಷ ಎಸ್. ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ, ಬ್ಯಾಂಕಿನ ಹಿರಿಯ ಗ್ರಾಹಕ ಹರೀಶ್ ಭಟ್ ಅವರಿಗೆ ಓಣಂ ಸಾಮಗ್ರಿ ವಿತರಿಸುವ ಮೂಲಕ ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ ಅವರು ಮಾರುಕಟ್ಟೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, “ಸಹಕಾರಿ ರಂಗವು ಗ್ರಾಮೀಣ ಜನರ ಆರ್ಥಿಕ ಅಭಿವೃದ್ಧಿಯ ಬೆನ್ನೆಲುಬಾಗಿದೆ. ಹಬ್ಬದ ಸಂದರ್ಭದಲ್ಲಿ ಇಂತಹ ಮಾರುಕಟ್ಟೆಗಳನ್ನು ತೆರೆಯುವುದರಿಂದ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಸಾಮಗ್ರಿಗಳು ಲಭ್ಯವಾಗುವುದರೊಂದಿಗೆ, ಸ್ಥಳೀಯ ರೈತರು ಮತ್ತು ವ್ಯಾಪಾರಿಗಳಿಗೆ ಉತ್ತಮ ಪ್ರೋತ್ಸಾಹ ಸಿಗುತ್ತದೆ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾಂಕ್ ಅಧ್ಯಕ್ಷ ಎಸ್. ರಾಮಚಂದ್ರ ಅವರು, “ಸಹಕಾರಿ ಸಂಸ್ಥೆಗಳು ಯಾವಾಗಲೂ ಗ್ರಾಹಕರ ಮತ್ತು ಸಮಾಜದ ಹಿತಾಸಕ್ತಿಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತವೆ. ಹಬ್ಬದ ದಿನಗಳಲ್ಲಿ ಗ್ರಾಹಕರಿಗೆ ಆರ್ಥಿಕ ನೆರವು ಹಾಗೂ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ವಸ್ತುಗಳನ್ನು ಒದಗಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ಗ್ರಾಹಕರ ನಿರಂತರ ಸಹಕಾರದಿಂದಲೇ ಬ್ಯಾಂಕು ಇಷ್ಟು ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯವಾಗಿದೆ” ಎಂದು ನುಡಿದರು.
ಈ ಸಂದರ್ಭದಲ್ಲಿ ಬ್ಯಾಂಕ್ ನಿರ್ದೇಶಕರಾದ ಶೇಸಮ್ಮ, ಗಣೇಶ್ ಸಿ.ಎಚ್., ಯತೀಶ ಕಾಜೂರು, ಡಾ. ಕೆ.ಎ. ಖಾದರ್, ರೇಖಾ ಕೀರ್ತೇಶ್ವರ, ನಾರಾಯಣಿ ರಾಜನ್, ವಿಜಯ ಕನಿಲ, ಗಂಗಾಧರ ಕೆ.ಎಚ್., ಶ್ರೀಧರ ಹಾಗೂ ಎಂ.ಕೆ. ಮಸೂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇಂದಿನಿಂದ 10 ದಿನಗಳ ತನಕ ಕೇರಳ ಸರ್ಕಾರದ ಸಬ್ಸಿಡಿ ದರದಲ್ಲಿ ಅಕ್ಕಿ, ಸಕ್ಕರೆ, ತೆಂಗಿನ ಎಣ್ಣೆ, ಕಡ್ಲೆ, ಉದ್ದು ಸೇರಿದಂತೆ ಸರಿ ಸುಮಾರು 13 ಅಗತ್ಯ ಸಾಮಗ್ರಿಗಳು ಇಲ್ಲಿ ಲಭ್ಯವಿರಲಿರುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.

ಆರಂಭದ ದಿನದಲ್ಲೇ ಸಹಕಾರಿ ಮಾರುಕಟ್ಟೆಯಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಬ್ಯಾಂಕ್ ಕಾರ್ಯದರ್ಶಿ ರಾಜನ್ ನಾಯರ್ ಪಿ. ಸ್ವಾಗತಿಸಿ, ರಾಮಚಂದ್ರ ಕೆ. ವಂದಿಸಿದರು.

