ಉದ್ಯಾವರ ಮಾಡ ಕುಂಜತ್ತೂರಿನ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿಯ ವತಿಯಿಂದ ಆಯೋಜಿಸಲಾದ 50ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವದ ಸುವರ್ಣ ಮಹೋತ್ಸವ ಸೆಪ್ಟೆಂಬರ್ 4ರಿಂದ 6ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಸೆಪ್ಟೆಂಬರ್ 4ರಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ಬ್ರಹ್ಮಶ್ರೀ ಗೋಪಾಲ ಕೃಷ್ಣ ತಂತ್ರಿ ಬಡಾಜೆ ಬೂಡು ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾರಂಭದಲ್ಲಿ ಮಂಜಪ್ಪ ರೈ ತಾಲೆವು, ಸುರೇಶ ಶೆಟ್ಟಿ ಪರೆಂಕಿಲ, ಕುಂಜಣ್ಣ ಚೌಟ, ಬೀರು ಚೌಟ, ರಾಜ ಬೆಳ್ಚಪ್ಪಾಡರು, ತಿಮಿರಿ ಬೆಳ್ಚಪ್ಪಾಡರು, ಮಂಜು ಬೆಳ್ಚಪ್ಪಾಡರು, ಪದ್ಮನಾಭ ಹಲಸಿನಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಉತ್ಸವದ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಬಳಿಕ ಕೇರಳ ಹಾಗೂ ಕರ್ನಾಟಕ ರಾಜ್ಯಗಳ ಒಟ್ಟು 16 ತಂಡಗಳ ಮುಕ್ತ ಕಬಡ್ಡಿ ಪಂದ್ಯಾಟ ನಡೆಯಿತು. ಸಾಯಂಕಾಲ ಅರಸುಕೃಪಾ ಜೈ ಮಾರುತಿ ವ್ಯಾಯಾಮ ಶಾಲೆಯಲ್ಲಿ ಭಜನಾ ಕಾರ್ಯಕ್ರಮ ಜರುಗಿತು.


ಸೆಪ್ಟೆಂಬರ್ 5ರಂದು ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಭಕ್ತಿಗೀತೆ ಸ್ಪರ್ಧೆ ನಡೆಯಿತು. ಅಣ್ಣ ಮಾಡದಿಂದ ವೇದಿಕೆ ವರೆಗೆ ಆಕರ್ಷಕ ಮೊಸರು ಕುಡಿಕೆ ಮೆರವಣಿಗೆ ಹಾಗೂ ಮುದ್ದು ಕೃಷ್ಣ ಕಾರ್ಯಕ್ರಮ ಗಮನ ಸೆಳೆಯಿತು. ರಾತ್ರಿ 8 ಗಂಟೆಗೆ ಡಾ. ಜಯಪಾಲ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಬಳಿಕ ಲಕುಮಿ ತಂಡದ ಕುಸಲ್ದ ಕಲಾವಿದೆರ್ ಕುಡ್ಲ ಇವರಿಂದ ಆಂಟಿ ಬೊಕ್ಕ ಅಂಕಲ್ ನಾಟಕ ಪ್ರದರ್ಶನಗೊಂಡಿತು.

ಸೆಪ್ಟೆಂಬರ್ 6ರಂದು 15 ವರ್ಷದೊಳಗಿನ ಗಂಡು ಮಕ್ಕಳ ಕಬಡ್ಡಿ ಸ್ಪರ್ಧೆ ನಡೆಯಿತು. ಸ್ಥಳೀಯ ಪ್ರತಿಭೆಗಳಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮಗಳು ಪ್ರೇಕ್ಷಕರ ಮನರಂಜಿಸಿದವು. ರಾತ್ರಿ ಚಾ ಪರ್ಕ ಕಲಾವಿದರು ಕುಡ್ಲ ಇವರಿಂದ ಯಾನೊರಿ ಬರೋಲಿ ನಾಟಕ ಪ್ರದರ್ಶನದೊಂದಿಗೆ ಉತ್ಸವಕ್ಕೆ ಸಾಂಸ್ಕೃತಿಕ ಮೆರುಗು ದೊರೆಯಿತು.

50ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವವು ಧಾರ್ಮಿಕ ಭಕ್ತಿ, ಕ್ರೀಡಾ ಸ್ಪರ್ಧೆ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.




