ಮಂಜೇಶ್ವರ: ಕೇರಳ ವಿಧಾನಸಭಾ ಚುನಾವಣೆಯ ಅಂಗವಾಗಿ ಇಂದು ರಾಜ್ಯಾದ್ಯಂತ ಮತದಾನ ನಡೆಯುತ್ತಿದ್ದು, ಗಡಿ ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಎಲ್ಲೆಡೆ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ಮುಂದುವರಿದಿದೆ.
ಮತದಾನದ ಆರಂಭಿಕ ನಾಲ್ಕು ಗಂಟೆಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ನೀರಸ ಸ್ಪಂದನೆ ಕಂಡುಬಂದಿದ್ದರೂ, ನಂತರ ಸಮಯ ಕಳೆದಂತೆ ಮತಗಟ್ಟೆಗಳತ್ತ ಮತದಾರರ ಸಂಖ್ಯೆ ಹೆಚ್ಚಳ ಕಂಡಿದೆ. ಮಧ್ಯಾಹ್ನ ವೇಳೆಗೆ ಉತ್ತಮ ಪ್ರಮಾಣದ ಮತದಾನ ದಾಖಲಾಗಿದ್ದು, ಸಂಜೆಯ ವೇಳೆಗೆ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
ಕೆಲವು ಮತಗಟ್ಟೆಗಳಲ್ಲಿ ತಾಂತ್ರಿಕ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಏಜೆಂಟ್ಗಳು ಆಕ್ಷೇಪ ವ್ಯಕ್ತಪಡಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ಚುನಾವಣಾ ಅಧಿಕಾರಿಗಳು ಸಮಸ್ಯೆಗಳನ್ನು ಸರಿಪಡಿಸಿ ಮತದಾನ ಸುಗಮವಾಗಿ ಮುಂದುವರಿಯುವಂತೆ ಕ್ರಮ ಕೈಗೊಂಡರು.
ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಮತದಾನ ಹಕ್ಕನ್ನು ಚಲಾಯಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ ಅಶ್ರಫ್ ಅವರು ಬಡಾಜೆ ಶಾಲೆಯ ಬೂತ್ ಸಂಖ್ಯೆ 22ರಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರೆ, ಎಲ್‌ಡಿಎಫ್ ಅಭ್ಯರ್ಥಿ ಕೆ.ಆರ್. ಜಯಾನಂದ ಅವರು ಮಂಜೇಶ್ವರದ ವಾಮಂಜೂರು ಶಾಲೆಯಲ್ಲಿ ತಮ್ಮ ಮತದಾನ ಹಕ್ಕು ಬಳಸಿದರು.
ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಕಂಡುಬರುತ್ತಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚುವರಿ ನಿಗಾ ವಹಿಸಲಾಗಿದೆ. ಒಟ್ಟಾರೆಯಾಗಿ ಮಂಜೇಶ್ವರ ಕ್ಷೇತ್ರದಲ್ಲಿ ಶಾಂತಿಯುತ ಹಾಗೂ ಚುರುಕಿನ ಮತದಾನ ಪ್ರಕ್ರಿಯೆ ಮುಂದುವರಿದಿದೆ.