ಟೆಹ್ರಾನ್: ಕದನ ವಿರಾಮ ಒಪ್ಪಂದಕ್ಕೆ ಬರಲು ವಿಫಲವಾದ ಹಿನ್ನೆಲೆ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಹಡಗುಗಳಿಗೆ ದಿಗ್ರಂಧನ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ, ಇರಾನ್ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.
ಪರ್ಷಿಯನ್ ಕೊಲ್ಲಿ ಮತ್ತು ಒಮಾನ್ ಕೊಲ್ಲಿ ಪ್ರದೇಶದ ಯಾವುದೇ ಬಂದರುಗಳ ಮೇಲೂ ಯಾವ ಕ್ಷಣದಲ್ಲಾದರೂ ದಾಳಿ ನಡೆಸುವ ಸಾಧ್ಯತೆ ಇರುವುದಾಗಿ ಇರಾನ್ ಎಚ್ಚರಿಸಿದೆ. ಅಮೆರಿಕದ ದಿಗ್ರಂಧನ ಬೆದರಿಕೆಯನ್ನು ಕಟುವಾಗಿ ಟೀಕಿಸಿದ ಇರಾನ್, ಇಂತಹ ಕ್ರಮಗಳು ಸಮುದ್ರ ಭದ್ರತೆಯನ್ನು ಗಂಭೀರವಾಗಿ ಹಾನಿಗೊಳಿಸಬಹುದು ಎಂದು ತಿಳಿಸಿದೆ.
ಈ ಕುರಿತು ವರದಿ ಮಾಡಿದ Islamic Republic of Iran Broadcasting ಪ್ರಕಾರ, ಪ್ರಾದೇಶಿಕ ನೀರಿನಲ್ಲಿ ದೇಶದ ಹಕ್ಕುಗಳು ಮತ್ತು ಸಾರ್ವಭೌಮತ್ವವನ್ನು ಕಾಪಾಡುವುದು ತನ್ನ ಸಶಸ್ತ್ರ ಪಡೆಗಳ ಕಾನೂನುಬದ್ಧ ಕರ್ತವ್ಯ ಎಂದು ಇರಾನ್ ಹೇಳಿದೆ. “ಈ ಪ್ರದೇಶದ ಯಾವುದೇ ಬಂದರು ಸುರಕ್ಷಿತವಾಗಿರುವುದಿಲ್ಲ” ಎಂದು ಇರಾನಿನ ಮಿಲಿಟರಿ ಮತ್ತು ಕ್ರಾಂತಿಕಾರಿ ಗಾರ್ಡ್ ಪ್ರಕಟಣೆ ತಿಳಿಸಿದೆ.
ಇದೇ ವೇಳೆ ಹಾರ್ಮುಜ್ ಜಲಸಂಧಿ ಮೂಲಕ ವೈರಿ ರಾಷ್ಟ್ರಗಳಿಗೆ ಸಂಬಂಧಿಸಿದ ಹಡಗುಗಳ ಸಂಚಾರವನ್ನು ನಿರ್ಬಂಧಿಸಲಾಗುವುದು ಎಂದು ಇರಾನ್ ಸ್ಪಷ್ಟಪಡಿಸಿದೆ. ಆದರೆ ಇತರ ಹಡಗುಗಳಿಗೆ ತಮ್ಮ ನಿಯಮಾನುಸಾರ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದೆ.
ಪ್ರಾದೇಶಿಕ ನೀರಿನಲ್ಲಿ ಭದ್ರತೆ ಕಾಪಾಡುವ ಕಾರ್ಯವನ್ನು ಮುಂದುವರಿಸುವುದಾಗಿ ಪುನರುಚ್ಚರಿಸಿದ ಇರಾನ್, ಶತ್ರು ರಾಷ್ಟ್ರಗಳಿಗೆ ಸಂಬಂಧಿಸಿದ ಹಡಗುಗಳಿಗೆ ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಹಕ್ಕಿಲ್ಲ ಎಂದು ಹೇಳಿದೆ. ಈ ಬೆಳವಣಿಗೆಗಳು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಉದ್ವಿಗ್ನತೆಯನ್ನುಂಟುಮಾಡುವ ಸಾಧ್ಯತೆ ಇದೆ.