ಮಂಗಳೂರು: ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಯೋಗವಾಗಿ ಮೂಡಿಬರುತ್ತಿರುವ “ವಾದಿರಾಜ ವಾಲಗ ಮಂಡಳಿ” ಹಾಸ್ಯಮಯ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸಂಕಲನ, ಹಿನ್ನೆಲೆ ಸಂಗೀತ ಹಾಗೂ ಡಬ್ಬಿಂಗ್ ಕಾರ್ಯಗಳು ವೇಗವಾಗಿ ಸಾಗುತ್ತಿವೆ ಎಂದು ನಿರ್ಮಾಪಕ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎಂ.ಎನ್.ಆರ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವು ವಿಶಿಷ್ಟ ಕಥಾಹಂದರ ಮತ್ತು ಹೊಸ ಶೀರ್ಷಿಕೆಯ ಮೂಲಕ ಸಿನಿಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ಕರಾವಳಿ ಕನ್ನಡದ ಸೊಗಡನ್ನು ಒಳಗೊಂಡಿರುವ ಈ ಸಿನಿಮಾ ರಾಜ್ಯದಾದ್ಯಂತ ಪ್ರೇಕ್ಷಕರನ್ನು ಸೆಳೆಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
“ವರಾಹ ರೂಪಂ” ಹಾಡಿನ ಖ್ಯಾತಿಯ ಶಶಿರಾಜ್ ಕಾವೂರು ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪ್ರವೇಶಿಸುತ್ತಿದ್ದು, ಕಥೆ, ಚಿತ್ರಕತೆ ಹಾಗೂ ಸಂಭಾಷಣೆಯ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ. ಸುಮಾರು 50 ದಿನಗಳ ಕಾಲ ಎರಡು ಹಂತಗಳಲ್ಲಿ ಚಿತ್ರೀಕರಣ ನಡೆದಿದೆ.
ಚಿತ್ರದಲ್ಲಿ ಹಾಸ್ಯ, ಭಾವನೆ ಹಾಗೂ ಸಾಮಾಜಿಕ ಅಂಶಗಳನ್ನು ಸಮನ್ವಯಗೊಳಿಸಿ ಸಂಪೂರ್ಣ ಮನರಂಜನಾ ಪ್ಯಾಕೇಜ್ ರೂಪಿಸಲಾಗಿದೆ. ಕುಟುಂಬ ಸಮೇತ ವೀಕ್ಷಿಸಬಹುದಾದ ಈ ಚಿತ್ರವನ್ನು ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆ ಮಾಡುವ ಯೋಜನೆ ಇದೆ.
ನವೀನ್ ಪಡೀಲ್, ಪ್ರಕಾಶ್ ತುಮಿನಾಡು, ಮೈಮ್ ರಾಮದಾಸ್, ದೀಪಕ್ ರೈ ಪಾಣಾಜೆ ಹಾಗೂ ಪುಷ್ಪರಾಜ್ ಬೊಳ್ಳಾರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅರ್ಜುನ್ ವೇದಾಂತ ಮತ್ತು ಅಥರ್ವ ಪ್ರಕಾಶ್ ನಾಯಕ ನಟರಾಗಿ, ತನ್ನಿ ರಾವ್ ಹಾಗೂ ವೇನ್ಯ ರೈ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಲಕ್ಷ್ಮಣ ಕುಮಾರ್ ಮಲ್ಲೂರು ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರದ ಚಿತ್ರೀಕರಣಕ್ಕೆ ಅತ್ಯಾಧುನಿಕ Arri LF ಕ್ಯಾಮೆರಾ ಬಳಕೆಯಾಗಿದ್ದು, ಛಾಯಾಗ್ರಹಣವನ್ನು ಎಸ್. ಚಂದ್ರಶೇಖರನ್ ನಿರ್ವಹಿಸಿದ್ದಾರೆ. ಸಂಗೀತವನ್ನು ಮಣಿಕಾಂತ್ ಕದ್ರಿ ಸಂಯೋಜಿಸಿದ್ದು, ಸಾಹಸ ನಿರ್ದೇಶನವನ್ನು ಟೈಗರ್ ಶಿವು ಮಾಡಿದ್ದಾರೆ.
ಜಯಪ್ರಕಾಶ್ ತುಂಬೆ ಸಹ ನಿರ್ಮಾಪಕರಾಗಿ, ಸಂತೋಷ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜೇಶ್ ಕುಡ್ಡ ಮತ್ತು ಕಾರ್ತಿಕ್ ಪ್ರೊಡಕ್ಷನ್ ಮ್ಯಾನೇಜರ್‌ಗಳಾಗಿ ಸಹಕರಿಸಿದ್ದಾರೆ.
ಕರಾವಳಿ ಭಾಷೆಯ ನೈಜತೆಯನ್ನು ಉಳಿಸಿಕೊಂಡು ನಿರ್ಮಾಣವಾಗಿರುವ “ವಾದಿರಾಜ ವಾಲಗ ಮಂಡಳಿ” ಸಿನಿಮಾ ಆಗಸ್ಟ್ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಈಗಾಗಲೇ ಉತ್ತಮ ನಿರೀಕ್ಷೆ ವ್ಯಕ್ತವಾಗಿದ್ದು, ಬಿಡುಗಡೆಯ ನಂತರ ಉತ್ತಮ ಪ್ರತಿಕ್ರಿಯೆ ಸಿಗುವ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಶಶಿರಾಜ್ ಕಾವೂರು, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಸಹ ನಿರ್ದೇಶಕ ಜಯಪ್ರಕಾಶ್ ತುಂಬೆ, ನಟರಾದ ಅರ್ಜುನ್ ವೇದಾಂತ, ವೇನ್ಯ ರೈ, ಮೈಮ್ ರಾಮದಾಸ್, ರಾಜೇಶ್ ಕುಡ್ಲ, ಶೋಭಾರಾಜ್ ಪಾವೂರು, ಅಕ್ಷತ ವಿಟ್ಲ, ಗೋಪಿನಾಥ್ ಭಟ್, ಚೇತನ್ ರೈ ಮಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.