ಶಾರ್ಜಾದಲ್ಲಿ ತಾಯಿ-ಮಗಳ ಸಾವಿಗೆ ಹೊಸ ತಿರುವು: ಪತಿ ನಿಹಿಲ್ ಪೊಲೀಸ್ ವಶಕ್ಕೆ

ಶಾರ್ಜಾದಲ್ಲಿ ಮಲಯಾಳಿ ಮಹಿಳೆ ಮತ್ತು ಆಕೆಯ ಪುಟ್ಟ ಮಗಳು ಸಾವನ್ನಪ್ಪಿದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿ ನಿಹಿಲ್ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಕಣ್ಣೂರು ಮೂಲದ ಅರ್ಷಾ ಮತ್ತು ಆಕೆಯ ಮಗಳು ರುಹಿ ಮೃತಪಟ್ಟವರು. ಕಳೆದ ಬುಧವಾರ, ಶಾರ್ಜಾದ ಅಲ್ ನಹ್ದಾ ಪ್ರದೇಶದಲ್ಲಿರುವ ಬಹುಮಹಡಿ ಕಟ್ಟಡದಿಂದ ಕೆಳಗೆ ಬಿದ್ದು ಇಬ್ಬರೂ ಸಾವನ್ನಪ್ಪಿದ್ದರು. ಪ್ರಾಥಮಿಕ ಮಾಹಿತಿಯ ಪ್ರಕಾರ, ಅರ್ಷಾ ಮೊದಲು ತನ್ನ ಮಗುವನ್ನು ಮೇಲ್ಮಹಡಿಯಿಂದ ಕೆಳಗೆ ಎಸೆದು ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಆದರೆ, ಈ ಘಟನೆಯ ಹಿಂದೆ ಕೌಟುಂಬಿಕ ಕಲಹವಿದೆಯೇ ಎಂಬ ಪ್ರಶ್ನೆಗಳು ಈಗ ಉದ್ಭವಿಸಿವೆ. ಘಟನೆಗೆ ಮುನ್ನದ ದಿನ ಅರ್ಷಾ ಮತ್ತು ನಿಹಿಲ್ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು ಎಂದು ನೆರೆಹೊರೆಯವರು ತಿಳಿಸಿದ್ದಾರೆ.

ಇನ್ನೊಂದೆಡೆ, ಅರ್ಷಾಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿದ್ದವು ಎಂದು ನಿಹಿಲ್ ಹೇಳಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಕಟ್ಟಡದ ಭದ್ರತಾ ಸಿಬ್ಬಂದಿ ಬಹಿರಂಗಪಡಿಸಿದ್ದಾರೆ. ಆದರೆ ಈ ಹೇಳಿಕೆಯ ಸತ್ಯಾಸತ್ಯತೆ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಏಳು ವರ್ಷಗಳಿಂದ ಕುಟುಂಬವು ಅದೇ ಫ್ಲಾಟ್‌ನಲ್ಲಿ ವಾಸವಾಗಿದ್ದು, ಆನ್‌ಲೈನ್ ವ್ಯವಹಾರ ನಡೆಸುತ್ತಿತ್ತು. ಅರ್ಷಾ ಅವರ ಸಹೋದರಿ ಕೂಡ ಸಮೀಪದ ಫ್ಲಾಟ್‌ನಲ್ಲೇ ವಾಸಿಸುತ್ತಿದ್ದಾರೆ. ಅಲ್ಲದೆ, ನಿಹಿಲ್ ಅವರ ಕುಟುಂಬ ಸದಸ್ಯರೂ ಯುಎಇಯಲ್ಲೇ ನೆಲೆಸಿದ್ದಾರೆ.

ಘಟನೆಯ ವೇಳೆ ದೊಡ್ಡ ಶಬ್ದ ಕೇಳಿ ಹೊರಗೆ ಬಂದ ನಿವಾಸಿಗಳು, ತಾಯಿ-ಮಗಳ ಶವಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿರುವುದಾಗಿ ತಿಳಿಸಿದ್ದಾರೆ.

ಇದು ಕೇವಲ ಆತ್ಮಹತ್ಯೆಯ ಪ್ರಕರಣವೇ, ಅಥವಾ ಇದರ ಹಿಂದೆ ಇನ್ನೇನಾದರೂ ಕಾರಣಗಳಿವೆಯೇ ಎಂಬುದನ್ನು ಪತ್ತೆಹಚ್ಚಲು ಶಾರ್ಜಾ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಪ್ರಕರಣದ ನಿಜಾಂಶ ತನಿಖೆ ಪೂರ್ಣಗೊಂಡ ಬಳಿಕವೇ ಬಹಿರಂಗವಾಗಬೇಕಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!