ಪುಂಜಾಲಕಟ್ಟೆ : ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಂತರಾಜ್ಯ ಕಳ್ಳರನ್ನು ಪೊಲೀಸರು ಬಂದಿಸಿದ್ದಾರೆ.
ಕೇರಳ ನಿವಾಸಿ ಹಮೀದ್ @ ಅಬ್ದುಲ್ ಹಮೀದ್ ಕೆ @ ಅಮ್ಮಿ (36) ಮತ್ತು ಮೊಗ್ರಾಲ್ ಪುತ್ತೂರು ಕಾಸರಗೋಡು ನಿವಾಸಿ ಅಬ್ದುಲ್ ಜಾಬೀರ್ @ ಜಾಬಿ (38) ಬಂಧಿತರು.
ಬಂಧಿತರಿಂದ ಪುಂಜಾಲಕಟ್ಟೆ ಪೊಲೀಸ್ ಠಾಣಾ ಪ್ರಕರಣಕ್ಕೆ ಸಂಬಂಧಪಟ್ಟ ಸುಮಾರು 68.690 ಗ್ರಾಂ ಚಿನ್ನಾಭರಣ ಹಾಗೂ 2,00,000 ರೂ ನಗದು ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣಾ ಪ್ರಕರಣಕ್ಕೆ ಸಂಬಂಧಿಸಿದ 21.810 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಮಾರುತಿ ಸ್ವಿಫ್ಟ್ ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 20,67,000 ರೂ ಎಂದು ಅಂದಾಜಿಸಲಾಗಿದೆ.
ಘಟನೆಯ ವಿವರ :
ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ನಿವಾಸಿ ಡಿ. ಮುರಳಿ ಅವರ ಮನೆಯಲ್ಲಿ ಏ.5ರಂದು
ಮನೆಗೆ ನುಗ್ಗಿದ ಕಳ್ಳರು ಯಾವುದೋ ಆಯುಧದಿಂದ ಮೀಟಿ ಮನೆಯ ಮುಂಬಾಗಿಲ ಬೀಗವನ್ನು ಮುರಿದು ಒಳಪ್ರವೇಶಿಸಿ ಕಪಾಟಿನ ಲಾಕ್ ಮುರಿದು ಚಿನ್ನಾಭರಣ ಮತ್ತು ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡು ಕಳ್ಳರನ್ನು ಪತ್ತೆ ಮಾಡಿ ಕಳ್ಳತನ ಮಾಡಿದ ನಗದು ಹಾಗೂ ಚಿನ್ನಾಭರಣಗಳನ್ನು ಪತ್ತೆ ಮಾಡಿಕೊಡಬೇಕಾಗಿ ನೀಡಿದ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅ.ಕ್ರ: 38/2026 ಕಲಂ: 331(3), 331(4) 305 BNS-2023 ರಂತೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಪತ್ತೆಗೆ ತಂಡ ರಚಿಸಿದ ಪೊಲೀಸರು, ಮೇ.15ರಂದು ಹಮೀದ್ ಎಂಬಾತವನ್ನು ಬಂಧಿಸಿ,
ಆತನಿಂದ ಕೃತ್ಯಕ್ಕೆ ಉಪಯೋಗಿಸಿದ ಆಲ್ಟೋ ಕಾರನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಆರೋಪಿಯು ನೀಡಿದ ಮಾಹಿತಿಯಂತೆ ಪ್ರಕರಣದಲ್ಲಿ ಭಾಗಿಯಾದ ಇನ್ನೋರ್ವ ಆರೋಪಿ ಅಬ್ದುಲ್ ಜಾಬೀರ್ ಎಂಬಾತನನ್ನು ಬಂಧಿಸಿ, ಒಟ್ಟು ಮೌಲ್ಯ 20,67,000 ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಗಳು ಕೇರಳ ರಾಜ್ಯದಲ್ಲಿ ಹಾಗೂ ದ.ಕ ಜಿಲ್ಲೆಯ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ, ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಹಾಗೂ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದು, ತನಿಖೆ ಮುಂದುವರಿಯುತ್ತದೆ.
ಈ ಪ್ರಕರಣದ ಪತ್ತೆಕಾರ್ಯದಲ್ಲಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಅರುಣ್ ಕೆ, ಐ.ಪಿ.ಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್ ಭೂಮಾರೆಡ್ಡಿರವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಪೊಲೀಸ್ ಉಪಾಧೀಕ್ಷಕರಾದ ರೋಹಿಸಿ ಸಿ.ಕೆ ರವರ ನೇತ್ರತ್ವದಲ್ಲಿ ಬೆಳ್ತಂಗಡಿ ಗ್ರಾಮಾಂತರ ಸಿ.ಪಿ.ಐ ರವಿ ಬಿ.ಎಸ್, ಉಪ್ಪಿನಂಗಡಿ ಗ್ರಾಮಾಂತರ ಸಿ.ಪಿ.ಐ ನಾಗರಾಜ್ ಹೆಚ್.ಇ, ಪುಂಜಾಲಕಟ್ಟೆ ಠಾಣಾ ಪಿ.ಎಸ್.ಐ ರಾಜೇಶ್ ಕೆ.ವಿ, ಸಿಬ್ಬಂದಿಗಳಾದ ಏ.ಎಸ್.ಐ ಬೆನ್ನಿಚ್ಚನ್, ಏ.ಎಸ್.ಐ ಸುಂದರ ಶೆಟ್ಟಿ, ಏ.ಎಸ್.ಐ ವಿಶ್ವನಾಥ್ ನಾಯ್ಕ್, ಪ್ರವೀಣ್ ಮೂರುಗೋಳಿ, ರಾಜೇಶ್ ಎನ್, ವಿಜಯ್ ಕುಮಾರ್ ರೈ, ರಾಹುಲ್ ರಾವ್, ಸಂತೋಷ್, ಬಸವರಾಜ್, ರಜಿತ್, ನಾಗರಾಜ್ ರವರು ಈ ಕಳವು ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್ ಮತ್ತು ಸಂಪತ್ ಅವರು ಈ ಕಾರ್ಯಾಚರಣೆಗೆ ಸಹಕರಿಸಿದ್ದಾರೆ