ಮಂಗಳೂರು: ಶ್ರೀ ಸದಾಶಿವ ಶೆಟ್ಟಿ ಅಭಿಮಾನಿ ಸೇವಾ ಬಳಗದ ಬಾಯಾರು–ಬೆರಿಪದವು ಘಟಕದ ವತಿಯಿಂದ ಸಮಾಜಸೇವಕ ಡಾ. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅವರ ಜನ್ಮದಿನದ ಅಂಗವಾಗಿ ಸುಮಾರು 150 ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವಸ್ತ್ರದಾನ ಕಾರ್ಯಕ್ರಮ ನಡೆಯಿತು.
ಬೆರಿಪದವು ವಿದ್ಯಾರಣ್ಯ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಸೇವಾ ಬಳಗದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಹಾಗೂ ಡಾ. ಸದಾಶಿವ ಶೆಟ್ಟಿಯವರ ಸಹೋದರ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಡವರು ಹಾಗೂ ಅಶಕ್ತರ ಸಂಕಷ್ಟಗಳಿಗೆ ಸ್ಪಂದಿಸುವುದೇ ನಿಜವಾದ ಮಾನವೀಯತೆ. ‘ಮಾನವ ಸೇವೆಯೇ ಮಾಧವ ಸೇವೆ’ ಎಂಬ ತತ್ವದೊಂದಿಗೆ ಡಾ. ಸದಾಶಿವ ಶೆಟ್ಟಿಯವರು ನಡೆಸುತ್ತಿರುವ ಸಮಾಜಸೇವೆ ಎಲ್ಲರಿಗೂ ಮಾದರಿಯಾಗಿದ್ದು, ಅವರ ಸೇವಾ ಮನೋಭಾವವನ್ನು ಮುಂದುವರಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುಮಾರು 150 ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವಸ್ತ್ರಗಳನ್ನು ವಿತರಿಸಲಾಯಿತು. ವಿವಿಧ ಗಣ್ಯರು, ಕಾರ್ಯಕರ್ತರು, ದಾನಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು


