ಕಾಸರಗೋಡು: ನಗರದ ಲೈಟ್ ಹೌಸ್ ಬಳಿಯ ಕಡಲತೀರದಲ್ಲಿ ಶನಿವಾರ ಬೆಳಿಗ್ಗೆ ತಲೆ ಇಲ್ಲದ ಮನುಷ್ಯನ ಮೃತದೇಹ ಪತ್ತೆಯಾಗಿದ್ದು, ಭಾರೀ ಸಂಚಲನ ಮೂಡಿಸಿದೆ. ಮೀನುಗಾರರಿಗೆ ಪತ್ತೆಯಾದ ಈ ಶವವು ಸುಮಾರು ಒಂದು ತಿಂಗಳಷ್ಟು ಹಳೆಯದಾಗಿದ್ದು, ಕೊಳೆತ ಸ್ಥಿತಿಯಲ್ಲಿದೆ. ತಲೆ ಭಾಗವು ಶರೀರದಿಂದ ಬೇರ್ಪಟ್ಟಿದ್ದು, ಎಲುಬುಗಳು ಗೋಚರಿಸುತ್ತಿವೆ.

ಇದು ಆತ್ಮಹತ್ಯೆಯೇ ಅಥವಾ ಯಾರಾದರೂ ಕೃತ್ಯವೆಸಗಿ ಸಮುದ್ರಕ್ಕೆ ಎಸೆದ ಕೊಲೆಯೋ ಎಂಬ ಗಂಭೀರ ಅನುಮಾನಗಳು ವ್ಯಕ್ತವಾಗಿವೆ. ಈ ನಿಗೂಢ ಮರಣದ ಜಾಡನ್ನು ಹಿಡಿದಿರುವ ಕಾಸರಗೋಡು ನಗರ ಠಾಣಾ ಪೊಲೀಸರು, ಇತ್ತೀಚಿನ ದಿನಗಳಲ್ಲಿ ನಾಪತ್ತೆಯಾದವರ ಪಟ್ಟಿಯನ್ನು ಪರಿಶೀಲಿಸುತ್ತಿದ್ದಾರೆ.
ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿನ ಸತ್ಯ ಹೊರಬರಬೇಕಿದೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.


