ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಲ್ಯಾಟರೈಟ್ ಗಣಿಗಾರಿಕೆ ಗುತ್ತಿಗೆಯ ಹೆಸರಿನಲ್ಲಿ ಬಾಕ್ಸೈಟ್ (ಅಲ್ಯೂಮಿನಸ್ ಲ್ಯಾಟರೈಟ್) ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಪರಿಸರ ಹೋರಾಟಗಾರ ಬೆನೆಡಿಕ್ಟ್ ಫೆರ್ನಾಂಡಿಸ್ ಆರೋಪಿಸಿದರು.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ.30ಕ್ಕಿಂತ ಹೆಚ್ಚು ಅಲ್ಯೂಮಿನಾ ಅಂಶ ಹೊಂದಿರುವ ಖನಿಜವನ್ನು ಲ್ಯಾಟರೈಟ್ ಎಂದು ತೋರಿಸಿ ಗಣಿಗಾರಿಕೆ ನಡೆಸುವುದು ಪ್ರಮುಖ ಖನಿಜಗಳಿಗೆ ಸಂಬಂಧಿಸಿದ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದರು.

ಕರ್ನಾಟಕ ಹೈಕೋರ್ಟ್‌ನ WP No.14076/2026 ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ಅವರು, ರಾಸಾಯನಿಕ ಪರೀಕ್ಷೆಯಲ್ಲಿ ಖನಿಜವು ಪ್ರಮುಖ ಖನಿಜ ಎಂಬುದು ದೃಢಪಟ್ಟರೆ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಲು ನ್ಯಾಯಾಲಯ ಅವಕಾಶ ನೀಡಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಅನುಮತಿ ಪಡೆಯದೇ ಪ್ರಮುಖ ಖನಿಜಗಳ ಗಣಿಗಾರಿಕೆ ನಡೆಸುವುದು ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಅಧಿನಿಯಮ–1957 (MMDR Act, 1957) ಉಲ್ಲಂಘನೆಯಾಗಿದೆ. ಅಲ್ಲದೆ, ಲ್ಯಾಟರೈಟ್ ಹೆಸರಿನಲ್ಲಿ ಸಾಗಿಸಲಾಗುತ್ತಿರುವ ಈ ಖನಿಜವನ್ನು ಆಂಧ್ರ ಪ್ರದೇಶದ ಸಿಮೆಂಟ್ ಕಾರ್ಖಾನೆಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ ಎಂದು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ, ಸಂಬಂಧಿಸಿದ ಗಣಿಗಾರಿಕೆ ಪ್ರದೇಶಗಳಿಂದ ಮಾದರಿಗಳನ್ನು ಸಂಗ್ರಹಿಸಿ ರಾಸಾಯನಿಕ ಪರೀಕ್ಷೆ ನಡೆಸಬೇಕು. ಅಕ್ರಮ ಗಣಿಗಾರಿಕೆ ದೃಢಪಟ್ಟಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಗಣಿಗಾರಿಕೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರವನ್ನು ಅವರು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪರಿಸರ ಪ್ರೇಮಿ ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.

