ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಆದೇಶ ಹೊರಡಿಸಿದ್ದಾರೆ. ತಮ್ಮ ಇಬ್ಬರು ಪುತ್ರಿಯರು ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ನೇಮಕವಾಗಲು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದ ತನಿಖೆಗೆ ಶಿಫಾರಸು ಮಾಡಿರುವ ರಾಜ್ಯಪಾಲರು, ವಿಚಾರವನ್ನು ಸುಪ್ರೀಂ ಕೋರ್ಟ್ಗೆ ಉಲ್ಲೇಖಿಸುವಂತೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದ್ದಾರೆ. ಮುಂದಿನ ಆದೇಶದವರೆಗೆ ಆಯೋಗದ ಹಿರಿಯ ಸದಸ್ಯರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಪ್ರಕರಣದ ವಿವರಗಳ ಪ್ರಕಾರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ 50 ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ 2024ರ ಮಾರ್ಚ್ 15ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಶಿವಶಂಕರಪ್ಪ ಸಾಹುಕಾರ ಅವರ ಪುತ್ರಿ ಸುಮಾ ಎಸ್. ಸಾಹುಕಾರ ಅವರು 3ಬಿ ಮೀಸಲಾತಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು, ದಾಖಲೆಗಳ ಪರಿಶೀಲನೆ ವೇಳೆ ಸಲ್ಲಿಸಿದ್ದ 2020ರ ಆದಾಯ ಪ್ರಮಾಣಪತ್ರದಲ್ಲಿ ಕುಟುಂಬದ ವಾರ್ಷಿಕ ಆದಾಯ ಕೇವಲ ₹40 ಸಾವಿರ ಎಂದು ಉಲ್ಲೇಖಿಸಲಾಗಿತ್ತು. ಆದರೆ ಶಿವಶಂಕರಪ್ಪ ಅವರು 2019ರಿಂದಲೇ ಕೆಪಿಎಸ್ಸಿ ಸದಸ್ಯರಾಗಿ ವೇತನ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ ಈ ಮಾಹಿತಿ ಸುಳ್ಳಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ ಅಧಿಕಾರ ದುರುಪಯೋಗ, ತಪ್ಪು ಮಾಹಿತಿ ಸಲ್ಲಿಕೆ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವುದು ಅಗತ್ಯ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ. ಕೆಪಿಎಸ್ಸಿಯ ಸಮಗ್ರತೆ, ಪಾರದರ್ಶಕತೆ ಹಾಗೂ ಸಾರ್ವಜನಿಕ ವಿಶ್ವಾಸ ಕಾಪಾಡುವ ಉದ್ದೇಶದಿಂದ ರಾಷ್ಟ್ರಪತಿಗಳ ಮುಂದಿನ ಆದೇಶದವರೆಗೆ ಶಿವಶಂಕರಪ್ಪ ಸಾಹುಕಾರ ಅವರನ್ನು ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಲಾಗಿದೆ.

ಈ ಕುರಿತು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಕಟಣೆ ಹೊರಡಿಸಿದ್ದು, ತನಿಖೆ ಪೂರ್ಣಗೊಳ್ಳುವವರೆಗೆ ಆಯೋಗದ ಆಡಳಿತದಲ್ಲಿ ಯಾವುದೇ ವ್ಯತ್ಯಯವಾಗದಂತೆ ಹಿರಿಯ ಸದಸ್ಯರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದೆ.

