ಬಂಟ್ವಾಳ: ಕೆಂಪುಕಲ್ಲು ಸಾಗಿಸುತ್ತಿದ್ದ ಲಾರಿ ಪಲ್ಟಿ – ಕಾರ್ಮಿಕ ಮೃತ, ಇಬ್ಬರಿಗೆ ಗಂಭೀರ ಗಾಯ

ಬಂಟ್ವಾಳ ಸಮೀಪದ ದೇವಸ್ಯಪಡೂರು ಗ್ರಾಮದ ಅಲ್ಲಿಪಾದೆ ಬಳಿಯ ಅತ್ತಳಿಕೆ ಪ್ರದೇಶದಲ್ಲಿ ಕೆಂಪುಕಲ್ಲು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾದ ಪರಿಣಾಮ ಕಾರ್ಮಿಕನೋರ್ವ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಮೃತರನ್ನು ಕಾವಳಪಡೂರು ನಿವಾಸಿ ಪ್ರಮೋದ್ (42) ಎಂದು ಗುರುತಿಸಲಾಗಿದೆ. ಲಾರಿ ಚಾಲಕ ಸುನಿಲ್ ಹಾಗೂ ಮತ್ತೋರ್ವ ಕಾರ್ಮಿಕ ಕೃಷ್ಣಪ್ಪ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಪ್ರಾಥಮಿಕ ಮಾಹಿತಿಯ ಪ್ರಕಾರ, ಕಲ್ಲಿನ ಕೋರೆಯಿಂದ ಕೆಂಪುಕಲ್ಲು ತುಂಬಿಸಿಕೊಂಡು ಬರುತ್ತಿದ್ದ ವೇಳೆ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಸ್ಥಳೀಯರ ಮಾಹಿತಿ ಪ್ರಕಾರ ಬ್ರೇಕ್ ವೈಫಲ್ಯ ಸಂಭವಿಸಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಅಪಘಾತದ ನಿಖರ ಕಾರಣವು ಪೊಲೀಸ್ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.


ಲಾರಿ ಸಂಪೂರ್ಣ ಮಗುಚಿ ಬಿದ್ದ ಪರಿಣಾಮ ಅದರಡಿ ಸಿಲುಕಿದ್ದ ಪ್ರಮೋದ್ ಹಾಗೂ ಕೃಷ್ಣಪ್ಪ ಅವರನ್ನು ಜೆಸಿಬಿ ಯಂತ್ರದ ಸಹಾಯದಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಪ್ರಮೋದ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸ್ ಠಾಣೆಯ ಎಸ್‌ಐ ಆದರ್ಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!