ನೀಟ್ ಅಕ್ರಮ ಖಂಡನೆ: ಮಂಗಳೂರಿನಲ್ಲಿ ಸಾವಿರಾರು ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ

ಮಂಗಳೂರು: ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ಖಂಡಿಸಿ ಹಾಗೂ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ವಿ ದಿ ಪೀಪಲ್ ಆಫ್ ಇಂಡಿಯಾ – ಮಂಗಳೂರು ಸಂಘಟನೆಯ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಸಾವಿರಾರು ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು. ಹಂಪನಕಟ್ಟೆಯ ಮಿಲಾಗ್ರಿಸ್ ಸರ್ಕಲ್‌ನಿಂದ ಕುದ್ಮುಲ್ ರಂಗರಾವ್ ಪುರಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಬಳಿಕ ಪುರಭವನದ ಮುಂಭಾಗದಲ್ಲಿ ಶಾಂತಿಯುತ ಧರಣಿ ನಡೆಸಿದರು.

ಪ್ರತಿಭಟನಾಕಾರರು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮೃತಪಟ್ಟ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಸುಶಾನ್, ಎಥಾನ್ ತಾವೋ, ರೆಹಾನ್ ಮುಹಮ್ಮದ್ ಹಾಗೂ ಸಫಾನ್ ನ್ಯಾಸ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಸುಮಾರು 6,000ರಿಂದ 7,000 ವಿದ್ಯಾರ್ಥಿಗಳು ಭಾಗವಹಿಸಿದರು.

ಮೆರವಣಿಗೆಯ ವೇಳೆ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ವಿವಿಧ ಫಲಕಗಳನ್ನು ಪ್ರದರ್ಶಿಸಿದರು. ಪುರಭವನದ ಮುಂಭಾಗದಲ್ಲಿ ಮೊಬೈಲ್ ಟಾರ್ಚ್ ಬೆಳಗಿಸಿ ಹಾಗೂ ಮೇಣದಬತ್ತಿ ಹಚ್ಚುವ ಮೂಲಕ ವಿದ್ಯಾರ್ಥಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. “ಇದು ಕೇವಲ ನೀಟ್ ವಿರುದ್ಧದ ಹೋರಾಟವಲ್ಲ, ಪ್ರತಿಯೊಬ್ಬ ವಿದ್ಯಾರ್ಥಿಯ ಹಕ್ಕು ಮತ್ತು ಭವಿಷ್ಯಕ್ಕಾಗಿ ನಡೆಯುತ್ತಿರುವ ಹೋರಾಟ” ಎಂದು ವಿದ್ಯಾರ್ಥಿ ಮುಖಂಡರು ಹೇಳಿದರು.

ಹಂಪನಕಟ್ಟೆಯ ಮೂಲಕ ಸಾಗಿದ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಶಾಂತಿಯುತವಾಗಿ ಅಂತ್ಯಗೊಂಡ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ನ್ಯಾಯ ದೊರೆಯುವವರೆಗೂ ಹೋರಾಟ ಮುಂದುವರಿಸುವುದಾಗಿ ಪ್ರತಿಜ್ಞೆ ಕೈಗೊಂಡು, “ನಮ್ಮ ಭವಿಷ್ಯ ಮಾರಾಟಕ್ಕಿಲ್ಲ; ನಮ್ಮ ಕನಸುಗಳಿಗೆ ನ್ಯಾಯ ಸಿಗಬೇಕು” ಎಂಬ ಸಂದೇಶದೊಂದಿಗೆ ಪ್ರತಿಭಟನೆಯನ್ನು ಮುಕ್ತಾಯಗೊಳಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!