ತಿರುವನಂತಪುರಂ: ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಬಸ್ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ನಿರ್ವಾಹಕಿಯರಿಗೆ (ಕಂಡಕ್ಟರ್ಗಳಿಗೆ) ಋತುಚಕ್ರ (ಮಾಸಿಕ) ರಜೆ ನೀಡುವ ಕುರಿತು ವಿಳಂಬವಿಲ್ಲದೆ ತೀರ್ಮಾನ ಕೈಗೊಳ್ಳುವಂತೆ ಕೇರಳ ಹೈಕೋರ್ಟ್ ರಾಜ್ಯ ಸರ್ಕಾರ ಹಾಗೂ ಕೆಎಸ್ಆರ್ಟಿಸಿಗೆ ನಿರ್ದೇಶನ ನೀಡಿದೆ.
ಮಹಿಳಾ ನಿರ್ವಾಹಕಿಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಈ ವಿಷಯವನ್ನು ಶೀಘ್ರವಾಗಿ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದೆ.ಅರ್ಜಿದಾರರ ಪರ ವಕೀಲರು, ಋತುಚಕ್ರದ ಸಮಯದಲ್ಲಿ ದೀರ್ಘಕಾಲ ನಿಂತು ಮತ್ತು ನಿರಂತರವಾಗಿ ಓಡಾಡುತ್ತಾ ಕೆಲಸ ಮಾಡಬೇಕಾಗಿರುವುದರಿಂದ ಮಹಿಳಾ ನಿರ್ವಾಹಕಿಯರು ತೀವ್ರ ದೈಹಿಕ ತೊಂದರೆ ಅನುಭವಿಸುತ್ತಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಇದಲ್ಲದೆ, ಅನೇಕ ಕೆಎಸ್ಆರ್ಟಿಸಿ ಡೆಪೋಗಳಲ್ಲಿ ಸ್ವಚ್ಛ ಶೌಚಾಲಯಗಳ ಕೊರತೆ, ಸಮರ್ಪಕ ವಿಶ್ರಾಂತಿ ಕೊಠಡಿಗಳ ಅಭಾವ ಹಾಗೂ ಋತುಚಕ್ರದ ತ್ಯಾಜ್ಯವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲು ಅಗತ್ಯ ಸೌಲಭ್ಯಗಳಿಲ್ಲದಿರುವುದು ಮಹಿಳಾ ಸಿಬ್ಬಂದಿಯ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಈ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಋತುಚಕ್ರದ ಅವಧಿಯಲ್ಲಿ ಮಹಿಳಾ ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸುವುದು ಇನ್ನಷ್ಟು ಕಷ್ಟಕರವಾಗುತ್ತಿದೆ ಎಂದು ಅರ್ಜಿದಾರರು ನ್ಯಾಯಾಲಯದ ಮುಂದೆ ವಾದಿಸಿದರು.


