ಮಂಗಳೂರು: ಎಂಎಸ್‌ಎಲ್ (ಮಂಗಳೂರು ಸೌಂಡ್ಸ್ ಆ್ಯಂಡ್ ಲೈಟ್) ಪ್ರೊ ಎಕ್ಸ್‌ಪೋ ಅಸೋಸಿಯೇಷನ್ ವತಿಯಿಂದ ಎಂಎಸ್‌ಎಲ್ ಪ್ರೊ ಎಕ್ಸ್‌ಪೋದ ನಾಲ್ಕನೇ ಆವೃತ್ತಿ ಆಗಸ್ಟ್ 8 ಮತ್ತು 9ರಂದು ವಾಮಂಜೂರಿನ ಪಿಲಿಕುಳ ಸಮೀಪದ ಸ್ಕೌಟ್ ಮತ್ತು ಗೈಡ್ಸ್ ಭವನದಲ್ಲಿ ನಡೆಯಲಿದೆ ಎಂದು ಅಸೋಸಿಯೇಷನ್‌ನ ಜಂಟಿ ಕಾರ್ಯದರ್ಶಿ ಡಿಜೆ ಶ್ಯಾಮ್ (ಮ್ಯಾಕ್ಸ್ ಪ್ರೊ ಇವೆಂಟ್ಸ್) ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 8ರಂದು ಬೆಳಿಗ್ಗೆ 9 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಆಳ್ವಾಸ್ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಡಾ. ಮೋಹನ್ ಆಳ್ವ ಉದ್ಘಾಟಿಸಲಿದ್ದು, ಮಧುಬನ್ ಗ್ರಾಫಿಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಬಾರಿಯ ಎಕ್ಸ್‌ಪೋದಲ್ಲಿ ಮೂಡುಬಿದಿರೆಯ ಲೆಕ್ಸಾ ಲೈಟಿಂಗ್ಸ್ ಡೈಮಂಡ್ ಸ್ಟಾಲ್ ಪಾಲುದಾರರಾಗಿದ್ದು, ಮಂಗಳೂರಿನ ಎಫ್‌ಟಿಆರ್ ಸೌಂಡ್ ಟ್ರ್ಯಾಕ್ ಗೋಲ್ಡನ್ ಪಾಲುದಾರರಾಗಿ ಹಾಗೂ ಕೇರಳದ ಕೋಝಿಕೋಡ್‌ನ ಸೌಂಡ್ ಲ್ಯಾಂಡ್ ಬೆಂಬಲ ನೀಡುತ್ತಿದೆ. ಹರ್ಮನ್, ಜೆಬಿಎಲ್, ಯಮಹಾ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳ ಸ್ಟಾಲ್‌ಗಳು ಪ್ರದರ್ಶನದಲ್ಲಿ ಭಾಗವಹಿಸಲಿವೆ.

ಮುಂಬೈ, ಚೆನ್ನೈ, ಬೆಂಗಳೂರು, ಹುಬ್ಬಳ್ಳಿ, ಹೈದರಾಬಾದ್, ಕೋಝಿಕೋಡ್, ಛತ್ತೀಸ್‌ಗಢ ಹಾಗೂ ಮಂಗಳೂರಿನ ಪ್ರದರ್ಶಕರು ಎಕ್ಸ್‌ಪೋದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವರ್ಷದ ಪ್ರಮುಖ ಆಕರ್ಷಣೆಯಾಗಿ ತೆರೆದ ಗಾಳಿಯಲ್ಲಿ ಲೈನ್ ಅರೇ ಸೌಂಡ್ ಡೆಮೊ, ಅತ್ಯಾಧುನಿಕ ಧ್ವನಿ ಮತ್ತು ಬೆಳಕು ಉಪಕರಣಗಳ ಪ್ರದರ್ಶನ ಆಯೋಜಿಸಲಾಗಿದೆ. ಎಕ್ಸ್‌ಪೋದಲ್ಲಿ ವಿವಿಧ ಉತ್ಪನ್ನಗಳನ್ನು ವಿಶೇಷ ರಿಯಾಯಿತಿ ಹಾಗೂ ಆಕರ್ಷಕ ಕೊಡುಗೆ ದರದಲ್ಲಿ ಮುಂಗಡ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್‌ನ ಪ್ರಮುಖರಾದ ಕೆ. ನಿತ್ಯಾನಂದ, ವಿ.ವಿ. ಪೈ, ಮೋಹನ್, ಮಹೇಶ್, ರಂಜನ್, ಸ್ಯಾಮ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


