ಧರ್ಮತ್ತಡ್ಕ ಶಾಲೆಯಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ‘ಕನಕಾಭಿಯಾನ’ ಕಾರ್ಯಕ್ರಮಕ್ಕೆ ಚಾಲನೆ : ವಿದ್ಯಾರ್ಥಿಗಳಲ್ಲಿ ಕನಕದಾಸರ ಚಿಂತನೆ ಬಿತ್ತಿದ ವಿಶೇಷ ಕಾರ್ಯಕ್ರಮ

ಧರ್ಮತ್ತಡ್ಕ: ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠ ಹಾಗೂ ಕನಕದಾಸ ಸಂಶೋಧನಾ ಕೇಂದ್ರ, ಮಂಗಳಗಂಗೋತ್ರಿ ಇವರ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಕಾಸರಗೋಡು ಜಿಲ್ಲಾ ಮಟ್ಟದ ‘ಕನಕ ಚಿಂತನೆ ಪ್ರಸಾರ ಮಾಲಿಕೆ – ಕನಕಾಭಿಯಾನ’ ಕಾರ್ಯಕ್ರಮವು ಧರ್ಮತ್ತಡ್ಕದ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ನೇರೋಳು ಸುಬ್ಬಣ್ಣ ಭಟ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಶಾಲಾ ಪ್ರಬಂಧಕ ಶಂಕರನಾರಾಯಣ ಭಟ್ ಉದ್ಘಾಟಿಸಿ, ಕನಕದಾಸರ ಆದರ್ಶಗಳು ಇಂದಿನ ವಿದ್ಯಾರ್ಥಿ ಸಮುದಾಯಕ್ಕೆ ದಾರಿದೀಪವಾಗಿದ್ದು, ಅವರ ವಿಚಾರಧಾರೆಗಳನ್ನು ಯುವಜನತೆಗೆ ತಲುಪಿಸುವ ಇಂತಹ ಕಾರ್ಯಕ್ರಮಗಳು ಅತ್ಯಂತ ಮಹತ್ವದ್ದಾಗಿವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲ ಸತೀಶ್ ಕುಮಾರ್ ಶೆಟ್ಟಿ ವಹಿಸಿ, ವಿದ್ಯಾರ್ಥಿಗಳು ಸಾಹಿತ್ಯ, ಸಂಸ್ಕೃತಿ ಹಾಗೂ ಮೌಲ್ಯಾಧಾರಿತ ಬದುಕಿನತ್ತ ಮುಖಮಾಡಲು ಕನಕದಾಸರ ಚಿಂತನೆಗಳು ಪ್ರೇರಣೆಯಾಗಲಿ ಎಂದು ಹಾರೈಸಿದರು.
ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಅವರು ಕಾರ್ಯಕ್ರಮದ ಬಗ್ಗೆ ಆಶಯ ನುಡಿಯನ್ನು
ನೀಡಿದರು. ಶಾಲೆಯ ಮುಖ್ಯೋಪಾಧ್ಯಾಯ ಶಶಿಕುಮಾರ್. ಪಿ.ಹಾಗೂ ಕಾಸರಗೋಡು ಜಿಲ್ಲಾ ಕನಕಾಭಿಯಾನದ ಸಂಯೋಜಕಿ ರಾಜಶ್ರೀ ಟಿ. ರೈ, ಪೆರ್ಲ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನಾರ್ಥಿ ಸಾಯಿಸುಮಾ ನಾವಡ ಕಾರಿಂಜ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ‘ಕನಕದಾಸರ ಜೀವನ ಮತ್ತು ಸಾಹಿತ್ಯ’ ವಿಷಯದ ಕುರಿತು ಮನೋಜ್ಞ ಉಪನ್ಯಾಸ ನೀಡಿದರು. ಬಳಿಕ ವಿದ್ಯಾರ್ಥಿಗಳಿಗಾಗಿ ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಕನಕದಾಸರ ಸಾಹಿತ್ಯ ಮತ್ತು ಚಿಂತನೆಗಳ ಕುರಿತು ತಮ್ಮ ಜ್ಞಾನವನ್ನು ವಿಸ್ತರಿಸಿಕೊಂಡರು.

ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಅಧ್ಯಾಪಕಿ ಶ್ವೇತಾಕುಮಾರಿ ಎಂ ಸ್ವಾಗತಿಸಿ ಅಧ್ಯಾಪಕಿ ನಿವೇದಿತಾ ವಂದಿಸಿದರು.ಶಿಕ್ಷಕ ಸುಜಿತ್ ಕುಮಾರ್ ನಿರೂಪಿಸಿದರು.

ವಿದ್ಯಾರ್ಥಿಗಳಲ್ಲಿ ಕನಕದಾಸರ ಜೀವನ ಮೌಲ್ಯಗಳು, ಸಮಾನತೆ, ಭಕ್ತಿ ಹಾಗೂ ಸಾಹಿತ್ಯ ಪರಂಪರೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ನಡೆದ ಈ ‘ಕನಕಾಭಿಯಾನ’ ಕಾರ್ಯಕ್ರಮವು ಜನಮೆಚ್ಚುಗೆ ಗಳಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!