ಮಂಜೇಶ್ವರ: ಮಚ್ಚಂಪಾಡಿಯ ಯುವಕನೊಬ್ಬನ ಟೆಂಪೋವನ್ನು ತಡೆದು, ವಾಹನಕ್ಕೆ ಹಾನಿಗೈದು ಮಾರಣಾಂತಿಕ ಹಲ್ಲೆ ನಡೆಸಲು ಯತ್ನಿಸಿದ ನಾಲ್ವರ ತಂಡವನ್ನು ಸ್ಥಳೀಯರು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ ಸಂಜೆ ತೂಮಿನಾಡಿನಲ್ಲಿ ಸಂಭವಿಸಿದೆ.

ತೂಮಿನಾಡು ಹಿಲ್ ಟಾಪ್ ನಗರ ಪರಿಸರದಲ್ಲಿ ಈ ಘಟನೆ ನಡೆದಿದೆ. ಮಚ್ಚಂಪಾಡಿ ನಿವಾಸಿ ಎನ್ನಲಾದ ಯುವಕನ ಟೆಂಪೋವನ್ನು ನಾಲ್ವರು ದುಷ್ಕರ್ಮಿಗಳ ತಂಡ ಅಡ್ಡಗಟ್ಟಿ, ವಾಹನಕ್ಕೆ ಹಾನಿ ಮಾಡಿ ಹಿಗ್ಗಾಮುಗ್ಗಾ ಥಳಿಸಿದೆ.
ಹಲ್ಲೆಯಿಂದ ತಪ್ಪಿಸಿಕೊಳ್ಳಲು ಯುವಕ ಸಮೀಪದಲ್ಲಿದ್ದ ಮಸೀದಿಗೆ ನುಗ್ಗಿದ್ದಾರೆ ಎಂದು ತಿಳಿದುಬಂದಿದೆ.

ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳದಲ್ಲಿ ಸೇರಿದ್ದ ಊರವರು ಧೈರ್ಯಪ್ರದರ್ಶಿಸಿ ನಾಲ್ಕು ಮಂದಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ತಂಡವು ಮಾದಕ ದ್ರವ್ಯ ಸೇವಿಸಿರುವುದಾಗಿ ಮತ್ತು ಮಾದಕ ದ್ರವ್ಯ ದಂಧೆಯಲ್ಲಿ ತೊಡಗಿರುವವರಾಗಿದ್ದಾರೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ.
ನಂತರ ಸ್ಥಳಕ್ಕೆ ಆಗಮಿಸಿದ ಮಂಜೇಶ್ವರ ಪೊಲೀಸರು, ಊರವರು ಒಪ್ಪಿಸಿದ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರ ಅಧಿಕೃತ ತಪಾಸಣೆ ಹಾಗೂ ವಿಚಾರಣೆಯ ಬಳಿಕ ಈ ಘಟನೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.


