ತೂಮಿನಾಡಿನಲ್ಲಿ ಟೆಂಪೋ ತಡೆದು ಯುವಕನ ಮೇಲೆ ಹಲ್ಲೆ: ನಾಲ್ವರ ಸೆರೆ

​ಮಂಜೇಶ್ವರ: ಮಚ್ಚಂಪಾಡಿಯ ಯುವಕನೊಬ್ಬನ ಟೆಂಪೋವನ್ನು ತಡೆದು, ವಾಹನಕ್ಕೆ ಹಾನಿಗೈದು ಮಾರಣಾಂತಿಕ ಹಲ್ಲೆ ನಡೆಸಲು ಯತ್ನಿಸಿದ ನಾಲ್ವರ ತಂಡವನ್ನು ಸ್ಥಳೀಯರು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ ಸಂಜೆ ತೂಮಿನಾಡಿನಲ್ಲಿ ಸಂಭವಿಸಿದೆ.

​ತೂಮಿನಾಡು ಹಿಲ್ ಟಾಪ್ ನಗರ ಪರಿಸರದಲ್ಲಿ ಈ ಘಟನೆ ನಡೆದಿದೆ. ಮಚ್ಚಂಪಾಡಿ ನಿವಾಸಿ ಎನ್ನಲಾದ ಯುವಕನ ಟೆಂಪೋವನ್ನು ನಾಲ್ವರು ದುಷ್ಕರ್ಮಿಗಳ ತಂಡ ಅಡ್ಡಗಟ್ಟಿ, ವಾಹನಕ್ಕೆ ಹಾನಿ ಮಾಡಿ ಹಿಗ್ಗಾಮುಗ್ಗಾ ಥಳಿಸಿದೆ.

ಹಲ್ಲೆಯಿಂದ ತಪ್ಪಿಸಿಕೊಳ್ಳಲು ಯುವಕ ಸಮೀಪದಲ್ಲಿದ್ದ ಮಸೀದಿಗೆ ನುಗ್ಗಿದ್ದಾರೆ ಎಂದು ತಿಳಿದುಬಂದಿದೆ.

​ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳದಲ್ಲಿ ಸೇರಿದ್ದ ಊರವರು ಧೈರ್ಯಪ್ರದರ್ಶಿಸಿ ನಾಲ್ಕು ಮಂದಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ತಂಡವು ಮಾದಕ ದ್ರವ್ಯ ಸೇವಿಸಿರುವುದಾಗಿ ಮತ್ತು ಮಾದಕ ದ್ರವ್ಯ ದಂಧೆಯಲ್ಲಿ ತೊಡಗಿರುವವರಾಗಿದ್ದಾರೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ.

​ನಂತರ ಸ್ಥಳಕ್ಕೆ ಆಗಮಿಸಿದ ಮಂಜೇಶ್ವರ ಪೊಲೀಸರು, ಊರವರು ಒಪ್ಪಿಸಿದ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರ ಅಧಿಕೃತ ತಪಾಸಣೆ ಹಾಗೂ ವಿಚಾರಣೆಯ ಬಳಿಕ ಈ ಘಟನೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!