ಕಾಸರಗೋಡು : ಪಯ್ಯನ್ನೂರು ಪಿಲಾತರ ಮಂಡೂರಿನಲ್ಲಿ ಸೋಮವಾರ ಮುಂಜಾನೆ ನಿಲ್ಲಿಸಿದ್ದ ಲಾರಿಗೆ ಟ್ಯಾಂಕರ್ ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಇಬ್ಬರು ಸುಟ್ಟು ಕರಕಲಾಗಿ ಸಾವನ್ನಪ್ಪಿದ್ದಾರೆ.

ಇಂದು ಮುಂಜಾನೆ ಮೂರೂವರೆ ಗಂಟೆಯ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ರಸ್ತೆ ಬದಿಯಲ್ಲಿ ತಾಂತ್ರಿಕ ದೋಷದಿಂದ ನಿಲ್ಲಿಸಲಾಗಿದ್ದ ಮರ ಸಾಗಾಣಿಕೆಯ ಲಾರಿಗೆ, ವೇಗವಾಗಿ ಬಂದ ಟ್ಯಾಂಕರ್ ಲಾರಿ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟ್ಯಾಂಕರ್ ಲಾರಿಗೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ಅದು ಸಂಪೂರ್ಣವಾಗಿ ಬೆಂಕಿಗೆಾತಿಗಿಹೋಗಿದೆ.

ಲಾರಿಯ ರಿಪೇರಿ ಕಾರ್ಯಕ್ಕಾಗಿ ಸ್ಥಳಕ್ಕೆ ಆಗಮಿಸಿದ್ದ ಮೆಕಾನಿಕ್ ಹಾಗೂ ಅವರ ಸಹಾಯಕರೇ ಈ ದುರ್ಘಟನೆಯಲ್ಲಿ ಜೀವ ಕಳೆದುಕೊಂಡಿದ್ದಾರೆ.
ಸಾವನ್ನಪ್ಪಿದವರನ್ನು ಕಾಸರಗೋಡು ಮತ್ತು ಪಾಲಕ್ಕಾಡ್ ಮೂಲದವರು ಎಂದು ಪ್ರಾಥಮಿಕ ತನಿಖೆಯಿಂದ ಅಂದಾಜಿಸಲಾಗಿದೆ.

ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಸಾರ್ವಜನಿಕರು ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಅತ್ಯಂತ ಗಂಭೀರ ಸ್ಥಿತಿಯಲ್ಲಿ ಸುಟ್ಟು ಕರಕಲಾಗಿದ್ದ ಇಬ್ಬರನ್ನೂ ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರೊಳಗೆ ಅವರ ಜೀವಹಾನಿ ಸಂಭವಿಸಿತ್ತು.
ಸದ್ಯ ಸ್ಥಳದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕ್ಯಾಂಪ್ ಮಾಡಿದ್ದು, ಮುಂದಿನ ತನಿಖೆ ಮುಂದುವರೆದಿದೆ.

