ಅಜ್ಮಾನ್:* ಯುಎಇ ಆರ್ಥಿಕತೆ ಮತ್ತು ಪ್ರವಾಸೋದ್ಯಮ ಸಚಿವ ಹಿಸ್ ಎಕ್ಸಲೆನ್ಸಿ ಅಬ್ದುಲ್ಲಾ ಬಿನ್ ತೌಕ್ ಅಲ್ ಮರಿ ಅವರು ಅಜ್ಮಾನ್‌ನಲ್ಲಿರುವ ತುಂಬೆ ಮೆಡಿಸಿಟಿಗೆ ಭೇಟಿ ನೀಡಿದರು.
ತುಂಬೆ ಗ್ರೂಪ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್, ಆರೋಗ್ಯ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದೀನ್ ತುಂಬೆ ಹಾಗೂ ಸಂಸ್ಥೆಯ ಹಿರಿಯ ಶೈಕ್ಷಣಿಕ ಮತ್ತು ವೈದ್ಯಕೀಯ ಅಧಿಕಾರಿಗಳು ಸಚಿವರನ್ನು ಸ್ವಾಗತಿಸಿದರು.

ಭೇಟಿ ವೇಳೆ ಮಾತನಾಡಿದ ಅಬ್ದುಲ್ಲಾ ಬಿನ್ ತೌಕ್ ಅಲ್ ಮರಿ, ವೈದ್ಯಕೀಯ ಹಾಗೂ ದೀರ್ಘಾಯುಷ್ಯ ಪ್ರವಾಸೋದ್ಯಮವು ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಾಗಿವೆ. ಆರೋಗ್ಯ ಸೇವೆ, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಪ್ರವಾಸೋದ್ಯಮವನ್ನು ಯುಎಇ ಆರ್ಥಿಕತೆಯ ಪ್ರಮುಖ ಕ್ಷೇತ್ರಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ತುಂಬೆ ಗ್ರೂಪ್ ಯುಎಇಯ ವೈದ್ಯಕೀಯ ಹಾಗೂ ದೀರ್ಘಾಯುಷ್ಯ ಪ್ರವಾಸೋದ್ಯಮವನ್ನು ಜಾಗತಿಕ ಮಟ್ಟದಲ್ಲಿ ಬಲಪಡಿಸುವಲ್ಲಿ ಖಾಸಗಿ ವಲಯದ ಪ್ರಮುಖ ಪಾತ್ರ ವಹಿಸುತ್ತಿದೆ. 111ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು ಹಾಗೂ ವಿವಿಧ ದೇಶಗಳ ರೋಗಿಗಳಿಗೆ ತುಂಬೆ ಗ್ರೂಪ್ ಪ್ರಮುಖ ತಾಣವಾಗಿದೆ ಎಂದು ಅವರು ಹೇಳಿದರು.

ಸಚಿವರು ಗಲ್ಫ್ ಮೆಡಿಕಲ್ ಯೂನಿವರ್ಸಿಟಿ, ತುಂಬೆ ಯೂನಿವರ್ಸಿಟಿ ಹಾಸ್ಪಿಟಲ್, ತುಂಬೆ ಡೆಂಟಲ್ ಹಾಸ್ಪಿಟಲ್ ಹಾಗೂ ತುಂಬೆ ಫಿಸಿಕಲ್ ಥೆರಪಿ ಆ್ಯಂಡ್ ರಿಹ್ಯಾಬಿಲಿಟೇಶನ್ ಹಾಸ್ಪಿಟಲ್‌ಗೆ ಭೇಟಿ ನೀಡಿ, ಸಂಸ್ಥೆಗಳ ಶೈಕ್ಷಣಿಕ ಹಾಗೂ ವೈದ್ಯಕೀಯ ಚಟುವಟಿಕೆಗಳನ್ನು ವೀಕ್ಷಿಸಿದರು.
ಶಿಕ್ಷಣ, ರೋಗಿಗಳ ಆರೈಕೆ ಮತ್ತು ಸಂಶೋಧನೆಯನ್ನು ಒಂದೇ ವೇದಿಕೆಯಲ್ಲಿ ಸಮನ್ವಯಗೊಳಿಸಿರುವ ತುಂಬೆ ಮೆಡಿಸಿಟಿಯ ಮಾದರಿ ಹಾಗೂ 1998ರಲ್ಲಿ ಸ್ಥಾಪನೆಯಾದ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಬೆಳವಣಿಗೆಯ ಕುರಿತು ಸಚಿವರಿಗೆ ಮಾಹಿತಿ ನೀಡಲಾಯಿತು. ಪ್ರಸ್ತುತ ವಿಶ್ವದ 111ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಖಾಸಗಿ ವಲಯದ ಆರೋಗ್ಯ ಮತ್ತು ಶೈಕ್ಷಣಿಕ ಸಂಸ್ಥೆಗಳು ದೇಶದ ಆರ್ಥಿಕತೆಗೆ ನೀಡುತ್ತಿರುವ ಕೊಡುಗೆ, ಆರೋಗ್ಯ ಪ್ರವಾಸೋದ್ಯಮದ ಜಾಗತಿಕ ತಾಣವಾಗಿ ಯುಎಇಯ ಬೆಳವಣಿಗೆ ಹಾಗೂ ಅಂತಾರಾಷ್ಟ್ರೀಯ ರೋಗಿಗಳು, ವಿದ್ಯಾರ್ಥಿಗಳು ಮತ್ತು ಹೂಡಿಕೆಗಳನ್ನು ಆಕರ್ಷಿಸುವಲ್ಲಿ ತುಂಬೆ ಮೆಡಿಸಿಟಿಯ ಪಾತ್ರದ ಕುರಿತು ಚರ್ಚೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ತುಂಬೆ ಮೊಯ್ದೀನ್, ಸಚಿವರ ಭೇಟಿ ಸಂಸ್ಥೆಯ ಶೈಕ್ಷಣಿಕ, ವೈದ್ಯಕೀಯ ಮತ್ತು ಸಂಶೋಧನಾ ಕ್ಷೇತ್ರಗಳ ಬೆಳವಣಿಗೆಗೆ ದೊರೆತ ಮಹತ್ವದ ಮಾನ್ಯತೆಯಾಗಿದೆ ಎಂದು ಹೇಳಿದರು. ಯುಎಇಯನ್ನು ಜಾಗತಿಕ ಆರೋಗ್ಯ ಪ್ರವಾಸೋದ್ಯಮ ಹಾಗೂ ಜ್ಞಾನಾಧಾರಿತ ಕೈಗಾರಿಕೆಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ಪ್ರಯತ್ನಗಳಿಗೆ ತುಂಬೆ ಗ್ರೂಪ್ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ಬಳಿಕ ಸಚಿವರು ತುಂಬೆ ಮೆಡಿಸಿಟಿಯ ಸಂಶೋಧನೆ ಮತ್ತು ನವೋದ್ಯಮ ಕೇಂದ್ರಗಳಿಗೆ ಭೇಟಿ ನೀಡಿ ವಿವಿಧ ಯೋಜನೆಗಳ ಕುರಿತು ಮಾಹಿತಿ ಪಡೆದರು. ಬೋಧಕ ಸಿಬ್ಬಂದಿ, ವೈದ್ಯರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಮೆಡಿಸಿಟಿಯ ಶೈಕ್ಷಣಿಕ ಮತ್ತು ಸಂಶೋಧನಾ ವಾತಾವರಣದ ಕುರಿತ ಅವರ ಅನುಭವಗಳನ್ನು ಆಲಿಸಿದರು.

