ಉಪ್ಪಳ: ಉಪ್ಪಳ ಬಸ್ ನಿಲ್ದಾಣಕ್ಕೆ ಬಸ್‌ಗಳು ಪ್ರವೇಶಿಸಲು ಸಾಧ್ಯವಾಗದಷ್ಟು ಅನಧಿಕೃತ ಪಾರ್ಕಿಂಗ್ ಸಮಸ್ಯೆ ತೀವ್ರಗೊಂಡಿದೆ. ಬಸ್ ನಿಲ್ದಾಣದ ಸುತ್ತಮುತ್ತ ಹಾಗೂ ಪ್ರವೇಶ ದ್ವಾರದ ಬಳಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಬಸ್‌ಗಳನ್ನು ನಿಲ್ದಾಣದೊಳಗೆ ಕೊಂಡೊಯ್ಯಲು ಸಾಧ್ಯವಾಗದೆ ಚಾಲಕರು, ಸಿಬ್ಬಂದಿ ಹಾಗೂ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಸೇತುವೆಯ ಕೆಳಭಾಗದಲ್ಲಿ ವಾಹನಗಳನ್ನು ನಿಲುಗಡೆ ಮಾಡಲು ಪಂಚಾಯಿತಿ ವತಿಯಿಂದ ವಿಶೇಷ ವ್ಯವಸ್ಥೆ ಮಾಡಲಾಗಿದ್ದರೂ, ಅನೇಕ ವಾಹನ ಸವಾರರು ಅದನ್ನು ಬಳಸುತ್ತಿಲ್ಲ. ಬದಲಾಗಿ ಬಸ್ ನಿಲ್ದಾಣದೊಳಗೆ ಹಾಗೂ ಪ್ರವೇಶ ದ್ವಾರಗಳ ಮುಂಭಾಗದಲ್ಲಿ ದ್ವಿಚಕ್ರ ವಾಹನಗಳು ಮತ್ತು ಕಾರುಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ತೆರಳುತ್ತಿದ್ದಾರೆ. ಇಲ್ಲಿ ಪೊಲೀಸ್ ಎಯ್ಡ್ ಪೋಸ್ಟ್ ಇದ್ದರೂ ವಾಹನ ಮಾಲೀಕರು ಅದನ್ನು ನಿರ್ಲಕ್ಷಿಸುತ್ತಿದ್ದಾರೆ.

ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಬಸ್‌ಗಳಿಗೆ ತಿರುಗಲು ಅಥವಾ ನಿಲ್ದಾಣದೊಳಗೆ ಪ್ರವೇಶಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಬಸ್‌ಗಳು ರಸ್ತೆಯಲ್ಲೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು ಹಾಗೂ ಇಳಿಸುವುದರಿಂದ ದೊಡ್ಡ ಮಟ್ಟದ ಅಪಾಯದ ಭೀತಿ ಎದುರಾಗಿದೆ. ಅಲ್ಲದೆ, ನಿಗದಿತ ಸಮಯಕ್ಕೆ ಸರಿಯಾಗಿ ಬಸ್ ಸೇವೆ ನಡೆಸಲು ಸಾಧ್ಯವಾಗದೆ ಬಸ್ ಸಿಬ್ಬಂದಿ ಹಾಗೂ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಅನಧಿಕೃತ ಪಾರ್ಕಿಂಗ್ ವಿರುದ್ಧ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸಂಚಾರ ಸುಗಮಗೊಳಿಸಲು ಟ್ರಾಫಿಕ್ ಪೊಲೀಸರು ಅಥವಾ ಪಂಚಾಯಿತಿ ವತಿಯಿಂದ ಸೂಕ್ತ ಹಾಗೂ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮತ್ತು ವ್ಯಾಪಾರಿಗಳು ಆಗ್ರಹಿಸಿದ್ದಾರೆ.

