ಮಹಿಳೆಯರ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ತಡೆಗೆ ಪೋಷಣಾ ಭರಿತ ಆಹಾರ ಅತ್ಯಗತ್ಯ. – ಶ್ರೀಮತಿ ಫಾತಿಮತ್ ತಂಶೀನಾ

ಮಂಜೇಶ್ವರ: ಮಹಿಳೆಯರ ಮತ್ತು ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆಯನ್ನು ಸಂಪೂರ್ಣವಾಗಿ ನಿವಾರಿಸಲು ಹಾಗೂ ಅವರಲ್ಲಿ ಪೌಷ್ಟಿಕಾಂಶದ ಕುರಿತು ಜಾಗೃತಿ ಮೂಡಿಸಲು ಕೇಂದ್ರ ಸರಕಾರದ ಇಲಾಖೆಯು ಹಮ್ಮಿಕೊಳ್ಳುವ ಪೋಷಣಾ ಅಭಿಯಾನ (National Nutrition Mission) ಕಾರ್ಯಕ್ರಮಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಮಂಜೇಶ್ವರ ಗ್ರಾಮ ಪಂಚಾಯತ್ ನ ಪೊಸೋಟಿನ XI ವಾರ್ಡ್ ಸದಸ್ಯೆ ಶ್ರೀಮತಿ
ಫಾತಿಮತ್ ತಂಶೀನಾರವರು ಅಭಿಪ್ರಾಯಪಟ್ಟರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಐ.ಸಿ.ಡಿ.ಎಸ್ ಮಂಜೇಶ್ವರ, ಮಂಜೇಶ್ವರ ಗ್ರಾಮ ಪಂಚಾಯತ್ ಪೊಸೋಟ್ ಅಂಗನವಾಡಿ C. NO.29 ಕೇಂದ್ರದ ಸಂಯುಕ್ತಾಶ್ರಯದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗರ್ಭಾವಸ್ಥೆಯ ಆರಂಭದಿಂದ ಮಗುವಿನ ಮೊದಲ 1,000 ದಿನಗಳ ಆರೋಗ್ಯ ಮತ್ತು ಪೋಷಣೆ ಅತ್ಯಂತ ನಿರ್ಣಾಯಕವಾಗಿದೆ. ಗರ್ಭಿಣಿಯರು, ಬಾಣಂತಿಯರು, ಜನಿಸಿದ ಮಕ್ಕಳಿಂದ ತೊಡಗಿ 6 ವರ್ಷದ ವರೆಗಿನ ಮಕ್ಕಳು, ಕಿಶೋರಿಯರು ತಮ್ಮ ದೈನಂದಿನ ಆಹಾರದಲ್ಲಿ ಪ್ರೋಟೀನ್ ಹಾಗೂ ಸಮತೋಲಿತ ಪೌಷ್ಟಿಕಾಂಶಯುಕ್ತ ಆಹಾರವನ್ನು ಅಳವಡಿಸಿಕೊಳ್ಳಬೇಕೆಂದು ಸ್ಪಷ್ಟ ಪಡಿಸಿದರು. ಸರ್ಕಾರವು ಅಂಗನವಾಡಿ ಕೇಂದ್ರಗಳ ಮೂಲಕ ವಿತರಿಸುವ ಪೌಷ್ಟಿಕ ಆಹಾರ ಮತ್ತು ಆರೋಗ್ಯ ಸೇವೆಗಳನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮಂಜೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಫಾತಿಮತ್ ಜೌರ ವಹಿಸಿದ್ದರು. ಪತ್ರಕರ್ತ ರತನ್ ಕುಮಾರ್ ಹೊಸಂಗಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ವೇಳೆ ಆಹಾರ ಧಾನ್ಯಗಳ ಪ್ರದರ್ಶನ ನಡೆಯಿತು.


ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮಕ್ಕಳ ಹೆತ್ತವರು ಸ್ಥಳೀಯವಾಗಿ ಸಿಗುವ ಸಿರಿಧಾನ್ಯಗಳು, ಹಸಿರು ತರಕಾರಿಗಳು, ಸೊಪ್ಪು ಮತ್ತು ಹಣ್ಣುಗಳನ್ನು ಒಳಗೊಂಡ ವೈವಿಧ್ಯಮಯ ಪೌಷ್ಟಿಕ ಆಹಾರ ಪದಾರ್ಥಗಳ ಆಕರ್ಷಕ ಪ್ರದರ್ಶನವನ್ನು ಏರ್ಪಡಿಸಿದ್ದರು.

ಶಿಶುಗಳ ಸರಿಯಾದ ಬೆಳವಣಿಗೆಯನ್ನು ಗುರುತಿಸಲು “ಪೋಷಣ್ ಟ್ರ್ಯಾಕರ್” ತಂತ್ರಾಂಶದ ಮೂಲಕ ಮಕ್ಕಳ ತೂಕ ಮತ್ತು ಎತ್ತರವನ್ನು ಪರಿಶೀಲಿಸುವ ಪ್ರಕ್ರಿಯೆಯ ಬಗ್ಗೆಯೂ ಮಾಹಿತಿ ನೀಡಲಾಯಿತು. ಅಂಗನವಾಡಿ ಅಧ್ಯಾಪಕಿ ಶ್ರೀಮತಿ ಸುಮಂಗಲ ಎಂ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಅಂಗನವಾಡಿ ಸಹಾಯಕಿ ಶ್ರೀಮತಿ ದಾಕ್ಷಾಯಿಣಿ ಯು. ವಂದಿಸಿದರು. ಈ ವೇಳೆ ಪ್ರತಿಜ್ಞೆ ಹಾಗೂ ಸಹಿಸಂಗ್ರಹದ ಅಭಿಯಾನ ನಡೆಸಲಾಯಿತು. ಬಳಿಕ ಪೌಷ್ಟಿಕ ಆಹಾರ ಪದಾರ್ಥಗಳ ಸಹಭೋಜನ ನಡೆಯಿತು.

SHARE
Loading spinner

One thought on “ಮಹಿಳೆಯರ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ತಡೆಗೆ ಪೋಷಣಾ ಭರಿತ ಆಹಾರ ಅತ್ಯಗತ್ಯ. – ಶ್ರೀಮತಿ ಫಾತಿಮತ್ ತಂಶೀನಾ”

Leave a Reply

Your email address will not be published. Required fields are marked *

error: Content is protected !!