ಕಾಸರಗೋಡು: ನಗರದ ಅನುದಾನಿತ ಶಾಲೆಯ 10ನೇ ತರಗತಿ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಿರುಕುಳ ನೀಡಿದ ಶಿಕ್ಷಕಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೃತನ ಸಂಬಂಧಿಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

ಆರೋಪಿತ ಶಿಕ್ಷಕಿಯು ವಿದ್ಯಾರ್ಥಿಗೆ ನಿರಂತರ ಮಾನಸಿಕ ಕಿರುಕುಳ ನೀಡಿದ್ದು, ಹೆತ್ತವರನ್ನು ಶಾಲೆಗೆ ಕರೆಸಿ ಇತರರ ಎದುರು ಅವಮಾನಿಸುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕಲಾಕೂಟದ ಸ್ಪರ್ಧೆಯಲ್ಲಿ ‘ಎ’ ಗ್ರೇಡ್ ಪಡೆದ ಬಾಲಕನ ಸಾಧನೆಯನ್ನು ಶಾಲಾ ಗ್ರೂಪ್‌ನಲ್ಲಿ ಹಂಚಿಕೊಳ್ಳದೆ ಕಡೆಗಣಿಸಲಾಗಿತ್ತು. ಈ ಸತತ ನಿಂದನೆಯಿಂದ ಮನನೊಂದು ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆನ್ನಲಾಗಿದೆ.

ಘಟನೆಯ ನಂತರವೂ ಶಿಕ್ಷಕಿ ಯಾವುದೇ ಅನುಕಂಪ ತೋರಿಲ್ಲ ಎಂದು ರಕ್ಷಕರು ಆರೋಪಿಸಿದ್ದು, ಇಂತಹ ಅನ್ಯಾಯ ಮರುಕಳಿಸದಂತೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

