ಭರವಸೆ ಒಂದು ವಸ್ತುವಿನ ಮೇಲೆಯಾಗಲಿ, ಒಬ್ಬರ ಮೇಲೆಯಾಗಲಿ ಮೂಡಲು ಸಲ್ಪ ಸಮಯ ಹಿಡಿಯುತ್ತದೆ . ಆದರೆ ಆ ಭಾವನೆ ಹುಸಿಯಾಗಲು ಮಹಾ ತಪ್ಪಸ್ಸಿನ ಸಮಯ ಬೇಕಾಗಿರುವುದಿಲ್ಲ . ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತೆ ಭಾವನೆ ಹುಸಿಯಾಗಲು ಅರೆ ನಿಮಿಷಗಳು ಸಾಕಾಗುತ್ತೆ. ಈ ಕ್ಷಣ ಬೆಟ್ಟದಷ್ಟು ನಿರೀಕ್ಷೆಯ ಭರವಸೆ ಜರಿದೇ ಹೋಗುತ್ತದೆ. ಒಮ್ಮೆ ಭರವಸೆಗಳು ಸುಳ್ಳಾದರೆ ಅದು ಅರ್ಥ ಹೀನವಾಗಿ ಹೋಗುವುದು ಖಂಡಿತ.
ಜೀವನದಲ್ಲಿ ಅದೆಷ್ಟೋ ಬಾರಿ ಈ ರೀತಿಯಾಗಿ ಬದುಕು ಸಾಗಬೇಕು,ಇವರೊಂದಿಗೆ ಬದುಕು ಸಾಗಬೇಕು, ಆಸೆಯು ಆಸೆಯಾಗಿ ಉಳಿಯದೆ ಅದನ್ನು ತೀರಿಸಬೇಕು, ಕನಸ್ಸು ನನಸ್ಸಿನ ಕದವನ್ನು ತಟ್ಟಬೇಕು ಎನ್ನುವ ಆಲೋಚನೆ ಇರುತ್ತದೆ. ಆದರೆ ಇದಲ್ಲೆವೂ ಆಗದು ಎಂದು ತಿಳಿದಾಗ ಭರವಸೆಗೆ ಭರ ಸಿಡಿಲಿನ ಹೊಡೆತ ಬೀಳುತ್ತದೆ. ಆ ಹೊಡೆತ ತಿಂದವರು ಕೆಲವು ಬಾರಿ ಚಕ್ರವ್ಯೂಹಕ್ಕೆ ಸಿಲುಕಿದರೆ ಇನ್ನೂ ಕೆಲವರು ಅದನ್ನು ಭೇದಿಸುವ ಚಾಣಾಕ್ಷರು ಕೂಡ ಇರುತ್ತಾರೆ.

ಭಾವನೆ ಹುಸಿಯಾದ ಕ್ಷಣವನ್ನು ಒಮ್ಮೆ ಯೋಚಿಸಿದರೆ ಸಾಕು ಕೆಟ್ಟ ಕೋಪ, ಅಸಮಾಧಾನ ಇವುಗಳ ಚಿಂತನೆ ಕಾಡುತ್ತದೆ. ಆ ಕ್ಷಣ ಎಲ್ಲಾ ನಿರೀಕ್ಷೆಗಳು ತಂಗಾಳಿಯ ಮುದವನ್ನು ನೀಡದೇ ಬಿರುಗಾಳಿಯ ಬಿರುಸಿನ ರೌದ್ರತೆಯ ದರ್ಶನವನ್ನೇ ಮಾಡಿಸುತ್ತದೆ. ಮೋಸದ ಜಾಲ, ವಂಚನೆಯ ಕಲಿಗಾಲ ಇವೆಲ್ಲದರ ಸ್ಪಷ್ಟತೆ ಸಿಗುತ್ತಾ ಹೋಗಿ ಅನುಭವ ಸಂತೆಯಲ್ಲಿ ಕಹಿಯಾಗಿ ಉಳಿದು ಬಿಡುತ್ತದೆ. ಅಲ್ಲೇ ನೆಲಕಚ್ಚಿ ಬಿದ್ದು ಬಿಡುತ್ತೇವೆ. ಆದರೆ ಬಿದ್ದ ಜಾಗದಲ್ಲಿ ಏಳುವುದು ಇತಿಹಾಸ ಅಧ್ಯಯನಕ್ಕೆ ಮುನ್ನುಡಿಯನ್ನು ಬರೆಯ ಬಲ್ಲದು.
ಸೋತರೆ ಆ ಚಿಂತೆಯಲ್ಲಿ ಕಾಲ ಕಳೆಯುವ ಅಗತ್ಯವಿಲ್ಲ. ಆ ಯೋಚನೆಯಲ್ಲಿ ದಿನವ ಕಳೆದರೆ ಅದರಿಂದ ಹೊರ ಬರಲು ಅಸಾಧ್ಯ. ಅದರಿಂದ ಹೊರ ಬಂದರೆ ಮಾತ್ರ ಜೀವನದಲ್ಲಿ ಯಶಸ್ವಿ ಸಾಧ್ಯ. ಆ ಸೋಲಿನ ಚಿಂತೆಯಿಂದ ಹೊರ ಬರುವುದು ಯಶಸ್ಸಿನ ಮೊದಲ ಮೆಟ್ಟಿಲಾಗಿರುತ್ತದೆ. ಧೈರ್ಯಂ ಸರ್ವತ್ರ ಸಾಧನಂ ಎನ್ನುವ ನಾಣ್ಣುಡಿಯನ್ನು ಮರೆಯುವಂತಿಲ್ಲ.

ಬರಹ : ಗಿರೀಶ್ ಪಿಎಂ, ಕಾಸರಗೋಡು


