ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ ವೈಮಾನಿಕ ದಾಳಿಗಳು ಮತ್ತಷ್ಟು ತೀವ್ರಗೊಂಡಿದ್ದು, ಸತತ ಆರು ದಿನಗಳಿಂದ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಗುರುವಾರ ರಾತ್ರಿ ಸೇತುವೆಗಳು, ರೈಲು ನಿಲ್ದಾಣಗಳು, ವಿದ್ಯುತ್ ಘಟಕಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಆಗ್ನೇಯ ಇರಾನ್‌ನ ಖಮೀರ್ ಕೌಂಟಿಯಲ್ಲಿ ಬಂದರ್ ಅಬ್ಬಾಸ್–ಶಿರಾಜ್ ಸಂಪರ್ಕ ಕಲ್ಪಿಸುವ ಗೆಬೈಲ್ ಹಾಗೂ ಕಪೂರೆಸ್ತಾನ್ ಸೇತುವೆಗಳು ದಾಳಿಯಲ್ಲಿ ಧ್ವಂಸಗೊಂಡಿವೆ ಎನ್ನಲಾಗಿದೆ. ಇದೇ ವೇಳೆ ರಸ್ತೆ, ರೈಲು ಮಾರ್ಗಗಳು ಹಾಗೂ ವಿದ್ಯುತ್ ಉತ್ಪಾದನಾ ಘಟಕಗಳ ಮೇಲೂ ಅಮೆರಿಕ ದಾಳಿ ನಡೆಸಿದ್ದು, ಇರಾನ್‌ನ ಪ್ರಮುಖ ಬಂದರು ಬಂದರ್ ಅಬ್ಬಾಸ್‌ನ ಸಂಪರ್ಕ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಉದ್ದೇಶವೇ ಈ ಕಾರ್ಯಾಚರಣೆಯಾಗಿದೆ ಎಂದು ವರದಿಗಳು ಹೇಳಿವೆ.

ದಾಳಿಯ ಪರಿಣಾಮ ಬಂದರ್ ಅಬ್ಬಾಸ್ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ವಿದ್ಯುತ್ ಕೊರತೆಯ ಹಿನ್ನೆಲೆಯಲ್ಲಿ ಅನಗತ್ಯ ಬಳಕೆ, ವಿಶೇಷವಾಗಿ ಏರ್ ಕಂಡೀಷನರ್ ಬಳಕೆಯನ್ನು ತಗ್ಗಿಸುವಂತೆ ಇರಾನ್ ಆಡಳಿತ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಗುರುವಾರ ರಾತ್ರಿ ನಡೆದ ದಾಳಿಯಲ್ಲಿ ಕನಿಷ್ಠ ಏಳು ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಇದೇ ವೇಳೆ ಅಮೆರಿಕ ದಾಳಿಯಿಂದ ದೇಶದ ಪ್ರಮುಖ ಮೂಲಸೌಕರ್ಯಗಳಿಗೆ ಹಾನಿಯಾಗಿರುವುದನ್ನು ಇರಾನ್ ಅಧಿಕೃತವಾಗಿ ದೃಢಪಡಿಸಿದ್ದು, ಪ್ರತಿಯಾಗಿ ಕತಾರ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದಾಗಿ ತಿಳಿಸಿದೆ. ಆದರೆ, ಇರಾನ್‌ನಿಂದ ಉಡಾಯಿಸಲಾದ ಕ್ಷಿಪಣಿಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಲಾಗಿದೆ ಎಂದು ಕತಾರ್ ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ.

ಇದನ್ನೇ ಮುಂದುವರಿಸಿ ಬಹ್ರೇನ್ ಹಾಗೂ ಜೋರ್ಡಾನ್ ದಿಕ್ಕಿನಲ್ಲಿಯೂ ಇರಾನ್ ಪ್ರತಿದಾಳಿ ನಡೆಸಿರುವ ವರದಿಗಳು ಬಂದಿವೆ. ಕುವೈತ್‌ನ ನೀರಿನ ಘಟಕ, ಸಿರಿಯಾದ ಅಲ್-ತನ್ಫ್‌ನಲ್ಲಿರುವ ಅಮೆರಿಕ
ಸೇನಾ ನೆಲೆ ಹಾಗೂ ಇರಾಕ್‌ನ ಕುರ್ಡಿಶ್ ಪ್ರದೇಶದಲ್ಲಿಯೂ ಸ್ಫೋಟಗಳು ಸಂಭವಿಸಿರುವುದಾಗಿ ವರದಿಯಾಗಿದೆ.
ಅಲ್ಲದೆ, ಹೊರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ವಾಣಿಜ್ಯ ಹಡಗಿನ ಮೇಲೂ ದಾಳಿ ನಡೆದಿರುವುದಾಗಿ ಬ್ರಿಟಿಷ್ ಮಿಲಿಟರಿ ಮಾಹಿತಿ ನೀಡಿದೆ.
ಗುರುವಾರ ರಾತ್ರಿ ಅಮೆರಿಕ ನಡೆಸಿದ ದಾಳಿಯಲ್ಲಿ ಆಗ್ನೇಯ ಇರಾನ್‌ನ ಇರಾನ್‌ಶಹರ್ ವಿಮಾನ ನಿಲ್ದಾಣ, ಒಂದು ರೈಲು ನಿಲ್ದಾಣ ಹಾಗೂ ಆರು ಸೇತುವೆಗಳು ಧ್ವಂಸಗೊಂಡಿವೆ ಎಂದು ವರದಿಗಳು ತಿಳಿಸಿವೆ. ಇರಾನ್‌ನ ಮಿಲಿಟರಿ ಸಾಮರ್ಥ್ಯವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಕಾರ್ಯಾಚರಣೆ ಮುಂದುವರಿದಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಅಧಿಕಾರಿಗಳು ಹೇಳಿಕೊಂಡಿದ್ದು, ಅಮೆರಿಕ ನಾಗರಿಕ ಮೂಲಸೌಕರ್ಯಗಳ ಮೇಲೆಯೂ ದಾಳಿ ನಡೆಸುತ್ತಿದೆ ಎಂದು ಇರಾನ್ ಗಂಭೀರ ಆರೋಪ ಮಾಡಿದೆ.

