2027ರ ಜನಗಣತಿ: ಕೇಂದ್ರ ಸರ್ಕಾರದಿಂದ 40 ಪ್ರಶ್ನೆಗಳ ಪ್ರಶ್ನಾವಳಿ ಬಿಡುಗಡೆ

ನವದೆಹಲಿ: ಜನಗಣತಿಗಾಗಿ ಕೇಂದ್ರ ಸರ್ಕಾರವು 40 ಪ್ರಶ್ನೆಗಳನ್ನು ಒಳಗೊಂಡ ಪ್ರಶ್ನಾವಳಿಯನ್ನು ಬಿಡುಗಡೆ ಮಾಡಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಜನಗಣತಿಯಲ್ಲಿ ಜಾತಿ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತಿದೆ. ಕೋವಿಡ್ ಲಸಿಕೆ ಪಡೆದ ಸ್ಥಳ, ಬ್ಯಾಂಕ್ ಖಾತೆಗಳು ಹಾಗೂ ಡಿಜಿಟಲ್ ಸಾಕ್ಷರತೆ ಸೇರಿದಂತೆ ಹಲವು ಮಾಹಿತಿಗಳನ್ನು ಪ್ರಶ್ನಾವಳಿಯಲ್ಲಿ ಸೇರಿಸಲಾಗಿದೆ.

ಆಧಾರ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಚಾಲನಾ ಪರವಾನಗಿ ಸೇರಿದಂತೆ ವಿವಿಧ ಗುರುತಿನ ದಾಖಲೆಗಳ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತದೆ.

ಸ್ವಾತಂತ್ರ್ಯಾನಂತರ ನಡೆಯುತ್ತಿರುವ ಎಂಟನೇ ಜನಗಣತಿ ಪ್ರಕ್ರಿಯೆ ನಾಳೆಯಿಂದ ಆರಂಭವಾಗಲಿದೆ. ಜನಗಣತಿ ಮಾಹಿತಿ ಸಂಗ್ರಹಿಸಲು 61,282 ಗಣತಿದಾರರು (Enumerators) ಮತ್ತು 10,189 ಮೇಲ್ವಿಚಾರಕರನ್ನು (Supervisors) ನಿಯೋಜಿಸಲಾಗಿದೆ.

ದೇಶದ ಜನರ ವಸತಿ, ಮೂಲಸೌಕರ್ಯಗಳು, ಜನಸಂಖ್ಯಾ ವಿವರಗಳು, ಶಿಕ್ಷಣ, ಆರ್ಥಿಕ ಚಟುವಟಿಕೆಗಳು ಮತ್ತು ವಲಸೆ ಸೇರಿದಂತೆ ಹಲವು ವಿಷಯಗಳ ಕುರಿತು ಗ್ರಾಮ, ಪಟ್ಟಣ ಹಾಗೂ ವಾರ್ಡ್ ಮಟ್ಟದಲ್ಲಿ ಸೂಕ್ಷ್ಮ ಮಾಹಿತಿಯನ್ನು ಜನಗಣತಿ ಒದಗಿಸಲಿದೆ. ಈ ಪ್ರಕ್ರಿಯೆಯನ್ನು 1948ರ ಜನಗಣತಿ ಕಾಯ್ದೆ ಮತ್ತು 1990ರ ಜನಗಣತಿ ನಿಯಮಗಳ ಅಡಿಯಲ್ಲಿ ನಿರ್ವಹಿಸಲಾಗುತ್ತದೆ.

2027ರ ಮಾರ್ಚ್ 1 ಜನಗಣತಿಯ ಪ್ರಮುಖ ಉಲ್ಲೇಖ ದಿನಾಂಕವಾಗಿದೆ. ಆದರೆ ಲಡಾಖ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳಿಗಾಗಿ 2026ರ ಅಕ್ಟೋಬರ್ 1 ಅನ್ನು ಉಲ್ಲೇಖ ದಿನಾಂಕವಾಗಿ ನಿಗದಿಪಡಿಸಲಾಗಿದೆ. ದೇಶದ ಇತರ ಭಾಗಗಳಲ್ಲಿ ಜನಗಣತಿ 2027ರ ಮಾರ್ಚ್ 1ರಿಂದ ಆರಂಭವಾಗಲಿದೆ.

ಲಡಾಖ್, ಜಮ್ಮು ಮತ್ತು ಕಾಶ್ಮೀರ ಹಾಗೂ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳ ಹಿಮಾವೃತ ಪ್ರದೇಶಗಳಲ್ಲಿ ಆಗಸ್ಟ್ 17ರಿಂದ ಆರಂಭವಾಗಲಿರುವ ಜನಗಣತಿಯ ಎರಡನೇ ಹಂತದ ಮುನ್ನ ಪ್ರಶ್ನಾವಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!