ಬಂಟ್ವಾಳ, ಜು. 1: ಶೆಡ್ ನಿರ್ಮಾಣ ಕಾರ್ಯದ ವೇಳೆ ಕಬ್ಬಿಣದ ಪೈಪ್ ವಿದ್ಯುತ್ ತಂತಿಗೆ ಆಕಸ್ಮಿಕವಾಗಿ ತಗುಲಿದ ಪರಿಣಾಮ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೇರಮಜಲು ಗ್ರಾಮದ ನಿವಾಸಿ ಎ. ಇಸ್ಮಾಯಿಲ್ (58) ಮೃತಪಟ್ಟವರು.

ಮೃತರ ಪುತ್ರ ಮಹಮ್ಮದ್ ಸಫ್ವಾನ್ ನೀಡಿದ ದೂರಿನ ಪ್ರಕಾರ, ಜೂನ್ 28ರಂದು ಸಂಜೆ 6.30ರಿಂದ 7 ಗಂಟೆಯ ನಡುವೆ ಗೂಡಂಗಡಿಯ ಮುಂಭಾಗದಲ್ಲಿ ಶೆಡ್ ನಿರ್ಮಿಸುವ ಉದ್ದೇಶದಿಂದ ಎರಡು ಕಬ್ಬಿಣದ ಪೈಪ್ಗಳನ್ನು ನೆಟ್ಟಿದ್ದರು. ಬಳಿಕ ಸುಮಾರು 20 ಅಡಿ ಉದ್ದದ ಮತ್ತೊಂದು ಕಬ್ಬಿಣದ ಪೈಪ್ ಅನ್ನು ಮೇಲಕ್ಕೆ ಎತ್ತಿ ಅದರೊಳಗಿನ ಮರಳನ್ನು ತೆರವುಗೊಳಿಸುವ ವೇಳೆ, ಅಂಗಡಿಯ ಮುಂಭಾಗ ಹಾದುಹೋಗಿದ್ದ ವಿದ್ಯುತ್ ತಂತಿಗೆ ಪೈಪ್ ಆಕಸ್ಮಿಕವಾಗಿ ತಗುಲಿದೆ. ಇದರಿಂದ ಎ. ಇಸ್ಮಾಯಿಲ್ ಅವರಿಗೆ ತೀವ್ರ ವಿದ್ಯುತ್ ಶಾಕ್ ಹೊಡೆದು ನೆಲಕ್ಕೆ ಬಿದ್ದಿದ್ದಾರೆ.
ತಕ್ಷಣ ಪುತ್ರ ಮಹಮ್ಮದ್ ಸಫ್ವಾನ್ ಅವರು ತಮ್ಮ ಕಾರಿನಲ್ಲಿ ಗಾಯಾಳುವನ್ನು ಮಂಗಳೂರಿನ ಪಡೀಲ್ನ ಜನಪ್ರಿಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅದೇ ದಿನ ರಾತ್ರಿ 9.22ಕ್ಕೆ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ (ಯುಡಿಆರ್) ದಾಖಲಿಸಿಕೊಂಡಿದ್ದು, ಕಲಂ 194 ಬಿಎನ್ಎಸ್ಎಸ್-2023ರಡಿ ತನಿಖೆ ಮುಂದುವರಿದಿದೆ.


