ಚಿನ್ನದ ವ್ಯಾಪಾರಿ ದರೋಡೆ ಪ್ರಕರಣ: 14 ಆರೋಪಿಗಳ ಫೋಟೋ ಬಿಡುಗಡೆ; ಮಾಹಿತಿ ನೀಡಿದವರಿಗೆ ಬಹುಮಾನ

ಕೇರಳ–ಕೊಡಗಿನಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಮಂಗಳೂರು ಪೊಲೀಸರ ಬಲೆ; ಸಾರ್ವಜನಿಕರ ಸಹಕಾರಕ್ಕೆ ಮನವಿ

ಮಂಗಳೂರು, ಜು. 6: ಚಿನ್ನದ ವ್ಯಾಪಾರಿಯನ್ನು ದರೋಡೆಗೈದ ಪ್ರಕರಣದಲ್ಲಿ ಮಂಗಳೂರು ಪೊಲೀಸರು ಮಹತ್ವದ ಪ್ರಗತಿ ಸಾಧಿಸಿದ್ದು, ಪ್ರಕರಣದ ಪ್ರಮುಖ ಆರೋಪಿಗಳ ಗುರುತು ಪತ್ತೆಹಚ್ಚಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ಕೇರಳ ಹಾಗೂ ಕೊಡಗು ಜಿಲ್ಲೆಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಇದೇ ವೇಳೆ ಕೃತ್ಯದಲ್ಲಿ ಭಾಗಿಯಾಗಿರುವ ನಟೋರಿಯಸ್ ಆರೋಪಿಗಳ ಫೋಟೋಗಳನ್ನು ಬಿಡುಗಡೆ ಮಾಡಿ ಸಾರ್ವಜನಿಕರ ಸಹಾಯ ಕೋರಿದ್ದಾರೆ.

ಪ್ರಕರಣದ ಮಾಸ್ಟರ್ ಮೈಂಡ್ ಪಾಂಡಿಚೇರಿ ಮೂಲದ ಶಿಬಿನ್ ಗಂಗಾಧರನ್ ಎಂದು ಪೊಲೀಸರು ಗುರುತಿಸಿದ್ದು, ಆತನೊಂದಿಗೆ ಒಟ್ಟು 14 ಮಂದಿ ಆರೋಪಿಗಳ ಫೋಟೋ ಹಾಗೂ ವಿವರಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿದ್ದಾರೆ. ಕೇರಳದ ವಿವಿಧ ಜಿಲ್ಲೆಗಳ ಶ್ರೀರಾಗ್, ಅತುಲ್, ಮಿಥುನ್‌ಲಾಲ್‌, ಅಜೀರ್ ತರಾಯಿಲ್, ವೈಶಾಕ್, ಅಸೀರ್ ಪಯ್ಯನ್ನೂರ್, ಪ್ರಣವ್, ವಿಜಿಲ್ ಅಂಜರಕಂಡಿ, ಕೊಡಗಿನ ಉಬೈದ್, ಫಿರೋಜ್, ಮೊಯ್ದು ಅಬ್ಬಾಸ್, ಜಿಯಾದ್ ಹಾಗೂ ಜಮೀರ್ ಅಲಿಕಾ ಪ್ರಕರಣದ ಆರೋಪಿಗಳೆಂದು ಗುರುತಿಸಲಾಗಿದೆ.

ಆರೋಪಿಗಳು ಇನ್ನೂ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ, ಅವರ ಬಂಧನಕ್ಕೆ ಸಾರ್ವಜನಿಕರು ಸಹಕರಿಸುವಂತೆ ಮಂಗಳೂರು ಪೊಲೀಸರು ಮನವಿ ಮಾಡಿದ್ದಾರೆ. ಆರೋಪಿಗಳ ಬಗ್ಗೆ ವಿಶ್ವಾಸಾರ್ಹ ಮಾಹಿತಿ ನೀಡುವವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಹಾಗೂ ಮಾಹಿತಿ ನೀಡಿದವರ ವಿವರವನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಫೋಟೋ ಹಾಗೂ ಹೆಸರುಗಳಿರುವ ಪೋಸ್ಟರ್‌ಗಳನ್ನು ಕರ್ನಾಟಕ ಮತ್ತು ಕೇರಳದ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಲು ಕ್ರಮ ಕೈಗೊಳ್ಳಲಾಗಿದೆ. ಮಂಗಳೂರು ಪೊಲೀಸರು ಕೇರಳ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹಲವು ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆರೋಪಿಗಳ ಸುಳಿವು ಸಿಗದ ಹಿನ್ನೆಲೆಯಲ್ಲಿ ಫೋಟೋಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗಿದೆ.

ಜೂನ್ 29ರ ನಸುಕಿನಲ್ಲಿ ಮಂಗಳೂರಿನ ಬೈಕಂಪಾಡಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪಯ್ಯನ್ನೂರು ಮೂಲದ ಚಿನ್ನದ ವ್ಯಾಪಾರಿ ವಿಕಾಸ್ ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ, ಸುಮಾರು 180 ಗ್ರಾಂ ಚಿನ್ನ ಸೇರಿದಂತೆ ₹23 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಇತರ ವಸ್ತುಗಳನ್ನು ದರೋಡೆ ಮಾಡಲಾಗಿತ್ತು.

ಈ ಪ್ರಕರಣದಲ್ಲಿ ಆರೋಪಿಗಳಿಗೆ ಸಹಕರಿಸಿದ ಆರೋಪದಡಿ ತಲಕ್ಕೇರಿ ಮೂಲದ ನಿಮಿಲ್, ಮಡಿಕೇರಿ ಮೂಲದ ಇರ್ಷಾದ್ ಹಾಗೂ ಮುಸ್ತಾಫ ಅವರನ್ನು ಪಣಂಬೂರು ಠಾಣೆ ಪೊಲೀಸರು ಈಗಾಗಲೇ ಬಂಧಿಸಿದ್ದು, ಪ್ರಮುಖ ಆರೋಪಿಗಳ ಬಂಧನಕ್ಕೆ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!