ಮಣಿಪಾಲ, ಅ.4: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE)ನ ಅಕಾಡೆಮಿಷಿಯನ್, ಪರಿಸರ ಶಿಕ್ಷಣ ತಜ್ಞ ಹಾಗೂ ಸಾಮಾಜಿಕ ಪರಿಣಾಮಕಾರಿ ಕಾರ್ಯಗಳ ನಾಯಕ ಡಾ. ಬಾಲಕೃಷ್ಣ ಎಸ್. ಮದ್ದೋಡಿ ಅವರಿಗೆ ‘ಸರ್ ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ–2026’ ಹಾಗೂ ‘ಐಐಬಿ ಎಕ್ಸಲೆನ್ಸ್ ಇನ್ ಅಕಾಡೆಮಿಕ್ ಲೀಡರ್ಶಿಪ್ ಅವಾರ್ಡ್’ ಪ್ರದಾನ ಮಾಡಲಾಯಿತು.

ಬೆಂಗಳೂರಿನ ಸಿಟಾಡೆಲ್ ಸರೋವರ್ ಪೋರ್ಟಿಕೊ ಹೋಟೆಲ್ನಲ್ಲಿ ‘ಐಕಾನ್ಸ್ ಆಫ್ ಇಂಡಿಯನ್ ಬಿಸಿನೆಸ್ ಮ್ಯಾಗಝಿನ್’ನ 41ನೇ ಆವೃತ್ತಿಯ ಅಂಗವಾಗಿ ನಡೆದ ವಿಶೇಷ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಶೈಕ್ಷಣಿಕ ಕ್ಷೇತ್ರದಲ್ಲಿ ಡಾ. ಬಾಲಕೃಷ್ಣ ಎಸ್. ಮದ್ದೋಡಿ ಅವರು ತೋರಿರುವ ನಾಯಕತ್ವ, ಗಮನಾರ್ಹ ಕೊಡುಗೆ ಹಾಗೂ ಪರಿಸರ ಶಿಕ್ಷಣ ಮತ್ತು ಸಾಮಾಜಿಕ ಹೊಣೆಗಾರಿಕೆಯ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಈ ಗೌರವಗಳನ್ನು ನೀಡಲಾಗಿದೆ. ವಿಶೇಷವಾಗಿ ಶೈಕ್ಷಣಿಕ ನಾಯಕತ್ವ ಮತ್ತು ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ‘ಐಐಬಿ ಎಕ್ಸಲೆನ್ಸ್ ಇನ್ ಅಕಾಡೆಮಿಕ್ ಲೀಡರ್ಶಿಪ್ ಅವಾರ್ಡ್’ಗೆ ಅವರನ್ನು ಆಯ್ಕೆ ಮಾಡಲಾಗಿದೆ.
ಸಮಾರಂಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಹಾಗೂ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ. ವೇಣುಗೋಪಾಲ್, ಪದ್ಮಶ್ರೀ ಪುರಸ್ಕೃತೆ ಹಾಗೂ ಖ್ಯಾತ ಏರೋಸ್ಪೇಸ್ ವಿಜ್ಞಾನಿ ಡಾ. ಶುಭಾ ವಿ., ಖ್ಯಾತ ಜಠರ–ಕರುಳಿನ ಶಸ್ತ್ರಚಿಕಿತ್ಸಕ ಹಾಗೂ ರಾಜವೊಕ್ಕಲಿಗರ ಸಂಘದ ನಿರ್ದೇಶಕ ಡಾ. ಅಂಜನಪ್ಪ, ಮಾಜಿ ಸೈನಿಕರ ಕಲ್ಯಾಣ ಸಂಘದ ಅಧ್ಯಕ್ಷ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುಬೇದಾರ್ ಮೇಜರ್ ಕುಮಾರಸ್ವಾಮಿ ಬಿ.ಕೆ., ಭಾರತೀಯ ವಾಯುಪಡೆಯ ಮಾಜಿ ಯೋಧ, ಕಾರ್ಗಿಲ್ ಯುದ್ಧದ ಆಪರೇಷನ್ ವಿಜಯ್ನಲ್ಲಿ ಭಾಗವಹಿಸಿದ್ದ ಹಾಗೂ ತ್ರಿಶೂಲ್ ಭಾರತೀಯ ಪುರಸ್ಕಾರ ಪುರಸ್ಕೃತ ಏರ್ ವೆಟರನ್ ತ್ರಿಲೋಕ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

