ಪಾವಂಜೆ ಬ್ರಿಡ್ಜ್ ಬಳಿಯ ಅಜ್ಞಾತ ಬಸ್ ನಿಲ್ದಾಣಕ್ಕೆ ಮುಕ್ತಿ ಕರುಣಿಸಿದ “ಮೀಡಿಯಾ ಮನಸುಗಳು”

ಸುರತ್ಕಲ್: ಮುಕ್ಕ ಸಮೀಪದ ಪಾವಂಜೆ ಬ್ರಿಡ್ಜ್ ಬಳಿಯ ಬಸ್ ನಿಲ್ದಾಣ ಗಿಡಗಂಟಿಗಳಿಂದ, ಹುಲ್ಲಿನಿಂದ ಮುಚ್ಚಿಹೋಗಿ ಅಜ್ಞಾತವಾಗಿತ್ತು. ಪ್ರತಿನಿತ್ಯ ಶಾಲಾ ಮಕ್ಕಳು, ಮಹಿಳೆಯರು ಬಸ್ ಕಾಯುವ ನಿಲ್ದಾಣವನ್ನು ಸ್ವಚ್ಛ ಮಾಡುವಂತೆ ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಮೀಡಿಯಾ ಮನಸುಗಳು ತಂಡದ ಸದಸ್ಯರು ರವಿವಾರ ಸಂಜೆ ತಾವೇ ಮುಂದಾಗಿ ಸ್ವಚ್ಛಗೊಳಿಸುವ ಮೂಲಕ ಸಮಾಜಕ್ಕೆ ಮಾದರಿಯಾದರು.


ಜನರ ಸಮಸ್ಯೆಗಳ ಬಗ್ಗೆ ತಕ್ಷಣ ಸ್ಪಂದಿಸುವ ತಂಡದ ಸದಸ್ಯರು, ತಮ್ಮ 12ನೇ ಕಾರ್ಯಕ್ರಮದ ಅಂಗವಾಗಿ ಈ ಬಸ್ ನಿಲ್ದಾಣಕ್ಕೆ ಹೊಸ ರೂಪ ನೀಡಲು ಮುಂದಾದರು. ಬಸ್ ನಿಲ್ದಾಣದ ಸುತ್ತ ಬೆಳೆದಿದ್ದ ಗಿಡಗಂಟಿಗಳನ್ನು ಕತ್ತರಿಸಿ, ಕಸ ಗುಡಿಸಿ ತ್ಯಾಜ್ಯವನ್ನು ತೆರವುಗೊಳಿಸಿ ವಿಲೇವಾರಿ ಮಾಡಿ ಪ್ರಯಾಣಿಕರಿಗೆ ಯೋಗ್ಯ ವಾತಾವರಣ ನಿರ್ಮಿಸಿಕೊಟ್ಟರು.
ಸ್ಥಳೀಯ ನಂದಿನಿ ಮಿತ್ರ ವೃಂದ ಹಲವು ವರ್ಷಗಳ ಹಿಂದೆ ನಿರ್ಮಿಸಿದ್ದ ಬಸ್ ನಿಲ್ದಾಣ ತೀರಾ ಕಿರಿದಾಗಿದ್ದು ಇಲ್ಲಿಗೊಂದು ಸುಸಜ್ಜಿತ ಬಸ್ ತಂಗುದಾಣ ನಿರ್ಮಿಸಲು ಹೆದ್ದಾರಿ ಪ್ರಾಧಿಕಾರವಾಗಲಿ ಸ್ಥಳೀಯ ಪಂಚಾಯತ್ ಅಗಲೀ ಮುಂದಾಗಿಲ್ಲ. ಬಸ್ ನಿಲ್ದಾಣ ಹುಲ್ಲಿನಿಂದ ಮುಚ್ಚಿಹೋಗಿದ್ದರೂ ಅದನ್ನು ತೆಗೆಯಲು ಗ್ರಾಮ ಪಂಚಾಯತ್ ಮುಂದಾಗಿರಲಿಲ್ಲ. ಇದರಿಂದ ಬಸ್ ಕಾಯುವ ಪ್ರಯಾಣಿಕರಿಗೆ ಸಮಸ್ಯೆ ಎದುರಾಗಿತ್ತು. ಈ ಬಗ್ಗೆ ಸಾರ್ವಜನಿಕರೊಬ್ಬರು ಸಂಘಟನೆಯ ಗಮನ ಸೆಳೆದಿದ್ದರು. ಮೀಡಿಯಾ ಮನಸುಗಳು ತಂಡದ ಸಾಮಾಜಿಕ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಯಿತು.


ಈ ಸ್ವಚ್ಛತಾ ಅಭಿಯಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಹಾಗೂ ‘ಮೀಡಿಯಾ ಮನಸುಗಳು’ ತಂಡದ ಶಶಿ ಬೆಳ್ಳಾಯರು, ಗಿರೀಶ್ ಮಣೇಲ್, ಶಿವು ಕುಲಾಲ್ ಹಾಗೂ ಸಂದೇಶ್ ಶೆಟ್ಟಿ, ಅನೂಪ್ ಸೂರಿಂಜೆ ಸಕ್ರಿಯವಾಗಿ ಭಾಗವಹಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!