
ಅಲ್ಪಸಂಖ್ಯಾತ ನಿರುದ್ಯೋಗಿ ಯುವಕ- ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಉದ್ಯೋಗ ದೊರಕಿಸಿಕೊಡಲು ಬೆಂಗಳೂರಿನಲ್ಲಿ ಕೋಚಿಂಗ್ ಸೆಂಟರ್ ಆರಂಭಿಸಿಸಲಾಗಿದೆ. ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಪ್ರತ್ಯೇಕವಾಗಿ ಸೆಂಟರ್ ಆರಂಭಿಸಲು ಶಿಫಾರಸು ಮಾಡಲಾಗಿದೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹ್ಮದ್ ತಿಳಿಸಿದ್ದಾರೆ.

ಮಂಗಳೂರಿನ ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಿರುದ್ಯೋಗಿ ಯುವಕ- ಯುವತಿಯರಿಗೆ ಅನುಕೂಲವಾಗಲು ಆಯೋಗದ ವೆಬ್‌ಸೈಟ್‌ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಮಾಡಲಾಗಿದೆ. ಯುಪಿಎಸ್‌ಸಿ, ಕೆಪಿಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಸೇರಿದಂತೆ ಸರಕಾರಿ ಹುದ್ದೆಗಳ ಮಾಹಿತಿ ಕಲೆಹಾಕಿ ಪ್ರತಿ 15 ದಿನಗಳಿಗೊಮ್ಮೆ ’ಎಂಪ್ಲಾಯಿಮೆಂಟ್ ನ್ಯೂಸ್ ಬುಲೆಟಿನ್’ ಪ್ರಕಟಿಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ಸರಕಾರಿ ಸೌಲಭ್ಯ ದೊರೆಯುವಾಗ ಆಗುವ ವಿಳಂಬ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಪರಿಹಾರಕ್ಕಾಗಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹ್ಮದ್ ತಿಳಿಸಿದರು.

2011ರ ಜನಗಣತಿಯ ಪ್ರಕಾರ ಜೈನರು ಬಿಟ್ಟು, ಉಳಿದ ಅಲ್ಪಸಂಖ್ಯಾತ ಸಮುದಾಯಗಳು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಕಳೆದ ವರ್ಷ 25,000- 30,000 ಮಕ್ಕಳನ್ನು ಒಂದನೇ ತರಗತಿಗೆ ದಾಖಲಾತಿ ಮಾಡಿಲ್ಲ. ಈ ಸಮುದಾಯಗಳ ಮಕ್ಕಳು ಶಾಲೆಗೆ ಸೇರುವಂತೆ ಮಾಡಲು ಮತ್ತು ಶಾಲೆಯಿಂದ ಹೊರಗುಳಿಯುವುದನ್ನು ತಡೆಯಲು ಇಲಾಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಲು ಸೂಚಿಸಲಾಗಿದೆ ಎಂದರು.

