ಮಂಗಳೂರು: ಮೇ 20ರಂದು ಔಷಧ ಅಂಗಡಿಗಳ ಸಂಪೂರ್ಣ ಬಂದ್

ಮಂಗಳೂರು:ದೇಶವ್ಯಾಪಿ ಔಷಧ ವ್ಯಾಪಾರಿಗಳ ಮುಷ್ಕರಕ್ಕೆ ಸಂಬಂಧಿಸಿದಂತೆ ಮೇ 20ರಂದು ನಡೆಯಲಿರುವ ಬಂದ್ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಸೌತ್ ಕನರಾ ಕೆಮ್ & ಡ್ರಗ್ಗಿಸ್ಟ್ಸ್ ಅಸೋಸಿಯೇಷನ್ ವತಿಯಿಂದ ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಯಿತು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷರಾದ ಅರುಣ್ ಶೆಟ್ಟಿ ಮಾತನಾಡಿ, ಆಲ್ ಇಂಡಿಯಾ ಆರ್ಗನೈಜೇಶನ್ ಆಫ್ ಕೆಮಿಸ್ಟ್ಸ್ & ಡ್ರಗ್ಗಿಸ್ಟ್ಸ್ (AIOCD) ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರ್ನಾಟಕ ಕೆಮಿಸ್ಟ್ಸ್ & ಡ್ರಗ್ಗಿಸ್ಟ್ಸ್ ಅಸೋಸಿಯೇಷನ್ (KCDA) ಬೆಂಬಲ ವ್ಯಕ್ತಪಡಿಸಿದ್ದು, ಅದರಂತೆ ಮೇ 20ರಂದು 24 ಗಂಟೆಗಳ ಕಾಲ ಸಂಪೂರ್ಣ ಬಂದ್ ಆಚರಿಸಲಾಗುವುದು ಎಂದು ತಿಳಿಸಿದರು.

ಮುಷ್ಕರಕ್ಕೆ ಪ್ರಮುಖ ಕಾರಣವೆಂದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿ.ಎಸ್.ಆರ್ 817 ದಿನಾಂಕ 28-08-2018 ಹಾಗೂ ಜಿ.ಎಸ್.ಆರ್ 220 ದಿನಾಂಕ 26-03-2020 ನಿಯಮಾವಳಿಗಳನ್ನು ಹಿಂಪಡೆಯಬೇಕೆಂಬ ಆಗ್ರಹವಾಗಿದೆ. ಈ ನಿಯಮಾವಳಿಗಳ ಮೂಲಕ ಆನ್‌ಲೈನ್ ಮೂಲಕ ಔಷಧ ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದನ್ನು ಸಂಘ ತೀವ್ರವಾಗಿ ವಿರೋಧಿಸಿದೆ ಎಂದು ಅವರು ಹೇಳಿದರು.

ಔಷಧಿಗಳು ಸಾಮಾನ್ಯ ವಸ್ತುಗಳಲ್ಲ. ಅವುಗಳ ಮಾರಾಟ ಮತ್ತು ವಿತರಣೆಗೆ ಕಟ್ಟುನಿಟ್ಟಿನ ನಿಯಂತ್ರಣ ಹಾಗೂ ಜವಾಬ್ದಾರಿಯುತ ವ್ಯವಸ್ಥೆ ಅಗತ್ಯವಿದೆ. ನಿಯಂತ್ರಣರಹಿತ ಆನ್‌ಲೈನ್ ಔಷಧ ಮಾರಾಟದಿಂದ ಶೆಡ್ಯೂಲ್-H ಮತ್ತು ಎನ್‌ಡಿಪಿಎಸ್ ಔಷಧಿಗಳ ದುರುಪಯೋಗ, ಸ್ವಯಂ ಔಷಧ ಸೇವನೆ, ನಕಲಿ ವೈದ್ಯಕೀಯ ಚೀಟಿಗಳ ಬಳಕೆ, ಸರಿಯಾದ ಸಂಗ್ರಹಣೆಯ ಕೊರತೆ ಹಾಗೂ ಅಸುರಕ್ಷಿತ ಔಷಧಿಗಳ ವಹಿವಾಟು ಹೆಚ್ಚುವ ಅಪಾಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕೃತಕ ಬುದ್ಧಿಮತ್ತೆ (AI) ಬಳಸಿ ನಕಲಿ ಪ್ರಿಸ್ಕ್ರಿಪ್ಷನ್‌ಗಳನ್ನು ಸೃಷ್ಟಿಸಿ ಔಷಧ ಖರೀದಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಗಂಭೀರ ಸಮಸ್ಯೆಯಾಗಿದೆ. ಯುವಜನತೆ ಇಂತಹ ಮಾದಕ ಮತ್ತು ನಿಯಂತ್ರಿತ ಔಷಧಿಗಳ ದುರುಪಯೋಗಕ್ಕೆ ಬಲಿಯಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಔಷಧ ಅಂಗಡಿಗಳಲ್ಲಿ ಔಷಧ ನಿಯಂತ್ರಣ ಇಲಾಖೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸುತ್ತಿದ್ದರೂ, ಆನ್‌ಲೈನ್ ಮಾರಾಟದಲ್ಲಿ ಇಂತಹ ನಿಯಂತ್ರಣಗಳ ಕೊರತೆಯಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಔಷಧ ವ್ಯಾಪಾರಿಗಳು ಮತ್ತು ಡ್ರಗ್ಗಿಸ್ಟ್‌ಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ದೇಶವ್ಯಾಪಿ ಮುಷ್ಕರ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಎ.ಕೆ. ಜಮಾಲ್, ಉಪಾಧ್ಯಕ್ಷ ಅಮೃತ್ ಕಿರಣ್ ರೈ, ಜಂಟಿ ಕಾರ್ಯದರ್ಶಿ ಶ್ರೀನಿವಾಸ್ ಭಟ್, ಖಜಾಂಚಿ ಚಂದ್ರಶೇಖರ್ ಭಟ್ ಸೇರಿದಂತೆ ಆಡಳಿತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!