ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ಕೊಲ್ಯ ಘಟಕ ಇದರ ಆಶ್ರಯದಲ್ಲಿ ನಡೆದ ಕರಾವಳಿ ತೀರದ ಹೆಮ್ಮೆಯ ಸಾಹಿತಿ ಜಾನಪದ ವಿದ್ವಾಂಸರು, ಲೇಖಕರು ಆಗಿರುವ ವಿದ್ವಾನ್ ದಿ.ರಮನಾಥ್ ಕೋಟೆಕಾರ್ ಇವರ ಜನುಮದಿನದ ಪ್ರಯುಕ್ತ ಆಯೋಜಿಸಲಾದ ರಾಜ್ಯ ಮಟ್ಟದ ಆನ್ಲೈನ್ ಕಥೆ ಮತ್ತು ಕವನ ಸ್ಪರ್ಧೆಗೆ ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಉತ್ತಮ ಪ್ರತಿಕ್ರಿಯೆಗಳು ಲಭ್ಯವಾಗಿದ್ದು, ಕಥಾ ವಿಭಾಗದಲ್ಲಿ ಒಟ್ಟು 133 ಕಥೆಗಳು ಹಾಗೂ ಕವನ ವಿಭಾಗದಲ್ಲಿ ಒಟ್ಟು 231 ಕವನಗಳು ಸ್ಫರ್ಧೆಗೆ ಬಂದಿರುತ್ತದೆ.
ಕಥಾ ಸ್ಪರ್ಧೆಯಲ್ಲಿ ಡಾ.ಸುರೇಶ ನೆಗಳಗುಳಿ ಮಂಗಳೂರು: ಪ್ರಥಮ
ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ: ರಮ್ಯ ರಘುಪತಿ ಕೊಕ್ಕಡ , ಬೆಳ್ತಂಗಡಿ

ಕಥಾ ವಿಭಾಗದಲ್ಲಿ ಡಾ.ಸುರೇಶ ನೆಗಳಗುಳಿ ಮಂಗಳೂರು ಇವರ “ಅನಾವರಣ” ಕಥೆ ಪ್ರಥಮ ಬಹುಮಾನಕ್ಕೆ ರೂ.10000 ಮತ್ತು ಶಾರದಾ ಎ ಅಂಚನ್ ಕೊಡವೂರು ಇವರ “ಸ್ವಗತ” ಕಥೆ ದ್ವಿತೀಯ ಬಹುಮಾನಕ್ಕೆ ರೂ.7500 ಹಾಗೂ ತೃತೀಯ ಬಹುಮಾನಕ್ಕೆ ಚೇತನ್ ವರ್ಕಾಡಿ ಮಂಜೇಶ್ವರ ಇವರ “ಪತಿವ್ರತೆ ” ಮತ್ತು ರೂಪಾಶ್ರೀ ರವೀಶ್ ಭಂಡಾರಿಬೆಟ್ಟು ಬಂಟ್ವಾಳ ಇವರ “ವಿಧವೆಯಾಗದ ವಿಧವೆ” ಕಥೆಗಳು (ತಲಾ ರೂ.2500) ಆಯ್ಕೆಯಾದವು.


ಸುಧಾ ಎನ್ ತೇಲ್ಕರ್ ಚೆನ್ನೈ, ಚಿತ್ರಾಶ್ರೀ ಮನೋಜ್ ಬೋಂದೆಲ್ ಮಂಗಳೂರು, ಎ.ಹರೀಶ ಡೋಂಗ್ರೆ ಅಲ್ಲೆತ್ತಿಮಾರು ಮಾಳ, ಪರಿಮಳ ಮಹೇಶ್ ರಾವ್ (ಜೀವಪರಿ)ಮಂಗಳೂರು, ಗಂಗಾದೇವಿ ಚಕ್ರಸಾಲಿ ಬೆಳಗಾವಿ ಇವರ ಕಥೆಗಳು ಮೆಚ್ಚುಗೆಯ ಬಹುಮಾನಕ್ಕೆ (ತಲಾ.ರೂ.1000) ಪಾತ್ರವಾಯಿತು.

ಕವನ ವಿಭಾಗದಲ್ಲಿ ರಮ್ಯ ರಘುಪತಿ ಕೊಕ್ಕಡ ಬೆಳ್ತಂಗಡಿ ಇವರ ಕವನ “ಊರ್ಮಿಳೆಯ ವ್ಯಥೆ” ಪ್ರಥಮ ಬಹುಮಾನಕ್ಕೆ ರೂ.7500, ದ್ವಿತೀಯ ಬಹುಮಾನಕ್ಕೆ ಹಿತೇಶ್ ಕುಮಾರ್ ಎ ಕಾಸರಗೋಡು ಇವರ ಕವನ ಏಕತೆಯ ಜ್ಯೋತಿ ರೂ.5000 ಚೈತ್ರ ಕಬ್ಬಿನಾಲೆ ಕಾರ್ಕಳ ಉಡುಪಿ ಇವರ ಕವನ “ಅಂಗರಾಜ ಕರ್ಣ” ರೂ.3000 ತೃತೀಯ ಬಹುಮಾನಕ್ಕೆ ಭಾಜನವಾಯಿತು .


ಕವನ ವಿಭಾಗದಲ್ಲಿ ಅನುಪಮ ಸುಲಾಖೆ ಹೊಸಪೇಟೆ ವಿಜಯನಗರ, ಶರ್ಮಿಳ ಉಡುಪ ಬೋಂದೆಲ್ ಮಂಗಳೂರು, ಸತ್ಯಲತಾ ಸಿದ್ಧಮೂಲೆ ಗೋವಿಂದೂರು ಬೆಳ್ತಂಗಡಿ, ವಿಶ್ವೇಶ್ವರ ಎಂ ಭಟ್ ಕೊಂಚಾಡಿ ಮಂಗಳೂರು ಮತ್ತು ಅಶ್ವಥ್ ಬರಿಮಾರು ಕಾಗೆಕಾನ ಬಂಟ್ವಾಳ ಇವರ ಕವನಗಳು ಮೆಚ್ಚುಗೆಯ ಬಹುಮಾನ (ತಲಾ ರೂ.1000)ಪಡೆದುಕೊಂಡವು.

ಕಥಾ ಸ್ಪರ್ಧೆಯ ತೀರ್ಪುಗಾರರಾಗಿ ಹಿರಿಯ ಸಾಹಿತಿ ಬಿ ಸತ್ಯವತಿ ಭಟ್ ಕೊಳಚಪ್ಪು ಹಾಗೂ ಕವನ ಸ್ಪರ್ಧೆಯ ತೀರ್ಪುಗಾರರಾಗಿ ಹಿರಿಯ ಸಾಹಿತಿ ವ. ಉಮೇಶ ಕಾರಂತ ಮಂಗಳೂರು ಇವರುಗಳು ಸಹಕರಿಸಿದರು.

ವಿಶೇಷ ರೀತಿಯಲ್ಲಿ ಫಲಿತಾಂಶ ಘೋಷಣೆ:
ರಾಜ್ಯ ಮಟ್ಟದ ಆನ್ಲೈನ್ ಕಥೆ ಮತ್ತು ಕವನದ ಫಲಿತಾಂಶದ ಘೋಷಣೆಯನ್ನು ಮೊಬೈಲ್ ನಲ್ಲಿ ಕಥೆ ಮತ್ತು ಕವನ ಸ್ಫರ್ಧೆಯಲ್ಲಿ ಭಾಗವಹಿಸಿದ ಎಲ್ಲರನ್ನೂ ಸೇರಿಸಿಕೊಂಡು ವಾಟ್ಸಾಪ್ ಬಳಗದ ಮೂಲಕ ವಿಶೇಷವಾಗಿ, ವೈವಿಧ್ಯಮಯವಾಗಿ ನಡೆಸಲಾಯಿತು. ಯುವವಾಹಿನಿ (ರಿ) ಕೊಲ್ಯ ಘಟಕದ ಕಾರ್ಯದರ್ಶಿ ಸೌಮ್ಯ ಯೋಗೀಶ್ ಕೋಟೆಕಾರ್ ಇವರ ಪ್ರಾಥನೆಯ ಮೂಲಕ “ಫಲಿತಾಂಶ ಘೋಷಣೆ” ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕರಾವಳಿ ತೀರದ ಅನರ್ಘ್ಯ ರತ್ನ ವಿದ್ವಾನ್ ದಿ. ರಮನಾಥ್ ಕೋಟೆಕಾರ್ ಇವರ ಬದುಕು ಮತ್ತು ಬರಹದ ಚಿತ್ರಣವನ್ನು ಬಿತ್ತರಿಸಲಾಯಿತು. ಯುವವಾಹಿನಿ (ರಿ) ಕೊಲ್ಯ ಘಟಕದ ಅಧ್ಯಕ್ಷರು ನಿತಿನ್ ಕರ್ಕೆರ ಸ್ವಾಗತಿಸಿದರು. ಈ ಸ್ಪರ್ಧೆಯ ಪ್ರಾಯೋಜಕರಾದ ವಿದ್ವಾನ್ ದಿ. ರಮನಾಥ್ ಕೋಟೆಕಾರ್ ಅವರ ಧರ್ಮಪತ್ನಿ ಆಶಾ ರಮಾನಾಥ್ ಕೋಟೆಕಾರ್ ಪ್ರಸ್ತಾವನೆಗೈದರು. ಕರಾವಳಿ ಗಂಡುಕಲೆ ಯಕ್ಷಗಾನದ ಹಾಡಿನ ಮೂಲಕ ಯುವವಾಹಿನಿ (ರಿ)ಕೊಲ್ಯ ಘಟಕದ ನಿಯೋಜಿತ ಕಾರ್ಯದರ್ಶಿ ಮುಕೇಶ್ ಕಿನ್ಯ ಕಾರ್ಯಕ್ರಮದ ಉದ್ಭಾಟನೆಗೆ ವಿಶೇಷ ಮೆರುಗು ನೀಡಿದರು.

ಈ ಸಂದರ್ಭದಲ್ಲಿ ವಿದ್ವಾನ್ ರಮಾನಾಥ್ ಕೋಟೆಕಾರ್ ಇವರ ಆಪ್ತ ಒಡನಾಡಿಗಳಿಂದ ಮನದ ಮಾತುಗಳನ್ನು ಪ್ರಸಾರ ಮಾಡಲಾಯಿತು. ಹಿರಿಯ ಸಾಹಿತಿ ಮುದ್ದು ಮೂಡುಬೆಳ್ಳೆ, ಡಾ.ಮೀನಾಕ್ಷಿ ರಾಮಚಂದ್ರ, ಬೆನೆಟ್ ಅಮಣ್ಣ, ನರೇಶ್ ಕುಮಾರ್ ಸಸಿಹಿತ್ಲು, ತಮ್ಮ ಒಡನಾಡಿಯ ಸಾಹಿತ್ಯ ಸೇವೆ ಮತ್ತು ಸಾಮಾಜಿಕ ಕಳಕಳಿಯ ಬದ್ಧತೆಯನ್ನು ಧ್ವನಿಮುದ್ರಣದ ಮೂಲಕ ಕಳುಹಿಸಿ ಆಶಯದ ಹನಿಗಳನ್ನು ವ್ಯಕ್ತಪಡಿಸಿದರು.ಬಾಲ್ಯದ ಸ್ನೇಹಿತರಾಗಿದ್ದ ವಿಖ್ಯಾತನಂದ ಸ್ವಾಮೀಜಿ ಶುಭಾರ್ಶೀವಗೈದರು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರು ಅಶೋಕ್ ಕುಮಾರ್ ಪಡ್ಪು ಕಾರ್ಯಕ್ರಮಕ್ಕೆ ಶುಭಸಿಂಚನಗೈದರು. ಸಹೋದರಿ ವೇದಾವತಿ ಟೀಚರ್ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಕಥೆ ಮತ್ತು ಕವನ ಸ್ಪರ್ಧೆಯ ತೀರ್ಪುಗಾರರಾದ ಹಿರಿಯ ಸಾಹಿತಿಗಳಾದ ಬಿ ಸತ್ಯವತಿ ಭಟ್ ಕೊಳಚಪ್ಪು ಮತ್ತು ವ ಉಮೇಶ ಕಾರಂತ ಇವರುಗಳ ಕಿರು ಪರಿಚಯವನ್ನು ಭಿತ್ತರಿಸಲಾಯಿ. ಸ್ಫರ್ಧೆಗೆ ಬಂದಿರುವ ಕಥೆ, ಕವನಗಳ ಕುರಿತು ತೀರ್ಪುಗಾರರ ಅನಿಸಿಕೆಯನ್ನು ಧ್ವನಿ ಮುದ್ರಣದ ಮೂಲಕ ಪ್ರಸಾರ ಮಾಡಲಾಯಿತು.ತೀರ್ಪುಗಾರರ ಅನಿಸಿಕೆಯ ನಂತರ ಕಥೆ ಮತ್ತು ಕವನ ಸ್ಪರ್ಧೆಯ ಫಲಿತಾಂಶವನ್ನು ಘೋಷಣೆ ಮಾಡಲಾಯಿತು.ಕೊನೆಯಲ್ಲಿ ಈ ಸ್ಫರ್ಧೆಯ ಸಂಚಾಲಕರಾದ ಲತೀಶ್ ಎಂ ಸಂಕೋಳಿಗೆ ಧನ್ಯವಾದ ಸಮರ್ಪಿಸಿದರು.


