ಮಂಗಳೂರು: ಆಕಾಶವಾಣಿಯ ಉನ್ನತ ಶ್ರೇಣಿಯ (ಟಾಪ್ ಗ್ರೇಡ್) ಕಲಾವಿದೆ ಹಾಗೂ ಚಲನಚಿತ್ರ ಹಿನ್ನೆಲೆ ಗಾಯಕಿ ಸಂಗೀತ ಬಾಲಚಂದ್ರ ಅವರು ತಮ್ಮ 25 ವರ್ಷಗಳ ಸಂಗೀತ ಪಯಣದ ಸ್ಮರಣಾರ್ಥ 25 ಗಂಟೆಗಳ ಕಾಲ ನಿರಂತರವಾಗಿ ದಾಸರಪದಗಳನ್ನು ಹಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸುವ ಐತಿಹಾಸಿಕ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಉಡುಪಿಯ ಶ್ರೀ ಕೃಷ್ಣ ಮಠದ ಸಮೀಪದಲ್ಲಿರುವ ಗೀತಾ ಮಂದಿರದ ಶ್ರೀ ಪುತ್ತಿಗೆ ನೃಸಿಂಹ ಸಭಾಂಗಣದಲ್ಲಿ ಈ ವಿಶೇಷ ಗಾಯನ ಕಾರ್ಯಕ್ರಮ ನಡೆಯಲಿದೆ. ಆಗಸ್ಟ್ 23ರಂದು ಬೆಳಗ್ಗೆ 6.30ಕ್ಕೆ ಆರಂಭವಾಗಲಿರುವ ಕಾರ್ಯಕ್ರಮವು ಆಗಸ್ಟ್ 24ರಂದು ಬೆಳಗ್ಗೆ 7.30ಕ್ಕೆ ಮುಕ್ತಾಯಗೊಳ್ಳಲಿದೆ. ಒಟ್ಟು 25 ಗಂಟೆಗಳ ಕಾಲ, ಅಂದರೆ 1,500 ನಿಮಿಷಗಳ ಕಾಲ ನಿರಂತರ ದಾಸರಪದ ಗಾಯನ ನಡೆಸಲಾಗುತ್ತದೆ.

ಭೀಮಾ ಜ್ಯುವೆಲ್ಲರ್ಸ್ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗುತ್ತಿರುವ ಈ ವಿಶೇಷ ಕಾರ್ಯಕ್ರಮಕ್ಕೆ ‘ಪಂಚವಿಂಶತಿ’ ಎಂದು ಹೆಸರಿಡಲಾಗಿದೆ. ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ದಾಖಲೆಯ ಗುರಿಯೊಂದಿಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಗೀತ ಬಾಲಚಂದ್ರ ಅವರು ಸತತ 25 ಗಂಟೆಗಳ ಕಾಲ ದಾಸರಪದಗಳನ್ನು ಗಾಯನ ಮಾಡಲಿದ್ದಾರೆ.
ಈ ಕುರಿತು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಗೀತ ಬಾಲಚಂದ್ರ, ಮಹಿಳಾ ಗಾಯಕಿಯೊಬ್ಬರು ಇಷ್ಟು ದೀರ್ಘ ಅವಧಿಗೆ, ಅದರಲ್ಲೂ ಪ್ರಮುಖವಾಗಿ ದಾಸರಪದಗಳನ್ನೇ ಆಯ್ಕೆ ಮಾಡಿಕೊಂಡು ನಿರಂತರವಾಗಿ ಗಾಯನ ಮಾಡುತ್ತಿರುವುದು ರಾಜ್ಯದಲ್ಲೇ ಅಪರೂಪದ ಪ್ರಯತ್ನವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ 250 ದಾಸರಪದಗಳಿಗೆ ಹೊಸದಾಗಿ ಸ್ವರ ಸಂಯೋಜನೆ ಮಾಡಲಾಗಿದ್ದು, ಅವುಗಳನ್ನು ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಕೀಬೋರ್ಡ್, ರಿದಮ್ ಪ್ಯಾಡ್, ಕೊಳಲು ಹಾಗೂ ತಬಲಾ ವಾದಕರನ್ನೊಳಗೊಂಡ ಎರಡು ಪ್ರತ್ಯೇಕ ಸಹಕಲಾವಿದರ ತಂಡಗಳು ನಿರಂತರವಾಗಿ ಲೈವ್ ಸಂಗೀತ ಸಾಥ್ ನೀಡಲಿವೆ.

ಕಳೆದ 25 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಗೀತ ಬಾಲಚಂದ್ರ ಅವರು, ಈ ವಿಶ್ವ ದಾಖಲೆ ಪ್ರಯತ್ನವು ತಮ್ಮ ಸಂಗೀತ ಪಯಣದ ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ಮೈಲಿಗಲ್ಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಸಾರ್ವಜನಿಕರು ಹಾಗೂ ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹ ನೀಡುವಂತೆ ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ರಂಗಭೂಮಿ ಕಲಾವಿದ ವಿಜಯ್ ಕುಮಾರ್ ಕೊಡಿಯಾಲ್ಬೈಲ್, ಸಂಗೀತ ಕಲಾವಿದರಾದ ವೀಕ್ಷಿತ್, ಗುರುರಾಜ್ ಹಾಗೂ ಎ.ಕೆ. ವಿಜಯ್ ಕೋಕಿಲ ಉಪಸ್ಥಿತರಿದ್ದರು.

