ಮಂಗಳೂರು:* ಪಂಚರಂಗಿ ಬ್ಯಾನರ್ ಅಡಿಯಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಗುರು ಹೆಗ್ಡೆ ಅವರ ನಿರ್ಮಾಣದಲ್ಲಿ, ಗುರು ಹೆಗ್ಡೆ ಮತ್ತು ವಿನಯ್ ಪ್ರೀತಂ ನಿರ್ದೇಶನದಲ್ಲಿ ಮೂಡಿಬಂದಿರುವ ‘ಅಮರ್ಥ’ ಸಿನಿಮಾ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ಗುರು ಹೆಗ್ಡೆ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಕಥೆ ಮತ್ತು ಚಿತ್ರಕಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದರಿಂದ ಚಿತ್ರದ ಬಿಡುಗಡೆ ವಿಳಂಬವಾಗಿದೆ. ಸುಮಾರು ಎರಡೂವರೆ ವರ್ಷಗಳ ಅವಧಿಯಲ್ಲಿ ಸಿನಿಮಾ ಪೂರ್ಣಗೊಂಡಿದ್ದು, ಅಂತಿಮ ಹಂತದಲ್ಲಿ ಏಳು–ಎಂಟು ತಿಂಗಳು ಚಿತ್ರವನ್ನು ಮತ್ತಷ್ಟು ಉತ್ತಮಗೊಳಿಸುವ ಕೆಲಸ ನಡೆದಿದೆ ಎಂದರು.

ಬಾಲ್ಯದಿಂದ ಮಧ್ಯವಯಸ್ಸಿನವರೆಗಿನ ಬದುಕಿನ ಪಯಣವನ್ನು ಆಧರಿಸಿರುವ ‘ಅಮರ್ಥ’ದಲ್ಲಿ ಹಾಸ್ಯವೂ ಕಥೆಯ ಭಾಗವಾಗಿಯೇ ಮೂಡಿಬಂದಿದೆ. ನಿರ್ದಿಷ್ಟ ನಾಯಕ–ನಾಯಕಿಯ ಕಥೆಯಾಗಿರದೆ, ಎಲ್ಲ ವಯೋಮಾನದವರಿಗೂ ತಮ್ಮ ಬದುಕಿನ ಕೆಲವು ಘಟನೆಗಳನ್ನು ನೆನಪಿಸುವಂತಹ ಕಥಾಹಂದರ ಚಿತ್ರದಲ್ಲಿದೆ ಎಂದು ಹೇಳಿದರು.
ನಟಿ ಮೇಘನಾ ರಾಜ್ ಮಾತನಾಡಿ, ಶ್ರೀನಗರ ಕಿಟ್ಟಿ ಅವರೊಂದಿಗೆ ಇದು ತಮ್ಮ ಮೂರನೇ ಸಿನಿಮಾ. ‘ಬಹುಪರಾಕ್’ ಮತ್ತು ‘ಬುದ್ಧಿವಂತ 2’ ಬಳಿಕ ಮತ್ತೊಮ್ಮೆ ಒಟ್ಟಿಗೆ ನಟಿಸುತ್ತಿದ್ದು, ‘ಅಮರ್ಥ’ದಲ್ಲಿ ಪಾತ್ರಗಳ ಸ್ವರೂಪ ಹಾಗೂ ವಯಸ್ಸಿನ ಹಿನ್ನೆಲೆ ವಿಭಿನ್ನವಾಗಿದೆ ಎಂದರು. ತುಳು ಭಾಷೆ ಕಲಿಯುವ ಆಸಕ್ತಿ ಹೊಂದಿದ್ದು, ಕರಾವಳಿಯ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಉತ್ಸುಕಳಾಗಿದ್ದೇನೆ ಎಂದರು.
ನಟ ಶ್ರೀನಗರ ಕಿಟ್ಟಿ ಮಾತನಾಡಿ, ‘ಅಮರ್ಥ’ ಬಾಲ್ಯದ ನೆನಪುಗಳು ಹಾಗೂ ಬದುಕಿನ ಪಯಣವನ್ನು ಮೆಲುಕು ಹಾಕಿಸುವ ವಿಭಿನ್ನ ಚಿತ್ರವಾಗಿದೆ. ಸುಮಾರು 48–50 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು, 35–40 ದಿನಗಳ ಚಿತ್ರೀಕರಣ ಶಿರ್ವ ಹಾಗೂ ಸುತ್ತಮುತ್ತ ನಡೆದಿದೆ. ಕರಾವಳಿಯ 22–24ಕ್ಕೂ ಅಧಿಕ ಕಲಾವಿದರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದರು.

ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿ ಗಮನ ಸೆಳೆದಿದ್ದು, ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ಪ್ರಮುಖ ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣಲಿದೆ. ಇದೇ ವೇಳೆ ಮಂಗಳೂರಿನ ಭಾರತ್ ಸಿನಿಮಾಸ್‌ನಲ್ಲಿ ಇಂದು ಚಿತ್ರದ ಪ್ರೀಮಿಯರ್ ಶೋ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ವಿನಯ್ ಪ್ರೀತಂ, ನಟಿ ಮಂಜು ಭಾಷಿಣಿ, ಆರಾಧನಾ ಹಾಗೂ ಸಂಭಾಷಣೆಕಾರ ವಿ.ಎಲ್. ಆಶ್ರಿತ್ ಉಪಸ್ಥಿತರಿದ್ದರು.

