ಮಂಗಳೂರು:* ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗೌರವಧನದ ಬದಲಿಗೆ ಕನಿಷ್ಠ ವೇತನ ನೀಡಬೇಕು, 2011ರಿಂದ ನಿವೃತ್ತರಾದವರಿಗೂ ಗ್ರಾಚ್ಯುಟಿ ಸೌಲಭ್ಯ ಕಲ್ಪಿಸಬೇಕು ಹಾಗೂ ಇಎಸ್ಐ ವ್ಯಾಪ್ತಿಗೆ ಒಳಪಡಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ತಾರಾ ಬಲ್ಲಾಳ್ ಸರ್ಕಾರವನ್ನು ಆಗ್ರಹಿಸಿದರು.

ನಗರದ ಪತ್ರಿಕಾಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗನವಾಡಿ ವ್ಯವಸ್ಥೆ ಆರಂಭವಾಗಿ ಸುಮಾರು 50 ವರ್ಷ ಕಳೆದರೂ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಇನ್ನೂ ಗೌರವಧನದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಅಂಗನವಾಡಿ ಕಾರ್ಯಕರ್ತೆಯರಿಗೆ ₹12,000 ಹಾಗೂ ಸಹಾಯಕಿಯರಿಗೆ ₹6,000 ಗೌರವಧನ ನೀಡಲಾಗುತ್ತಿದೆ. ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ, ಪೂರಕ ಪೌಷ್ಟಿಕ ಆಹಾರ, ಮಕ್ಕಳ ತೂಕ ಪರಿಶೀಲನೆ, ಮನೆ ಭೇಟಿ, ಪೋಷಣ್ ಅಭಿಯಾನ, ತಾಯಂದಿರ ಸಭೆ, ಆರೋಗ್ಯ ಮತ್ತು ಲಸಿಕಾ ಕಾರ್ಯಕ್ರಮಗಳು ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವುದರ ಜೊತೆಗೆ ಬಿಎಲ್ಒ, ಜನಗಣತಿ ಹಾಗೂ ಪಂಚಾಯಿತಿ ಮಟ್ಟದ ಸ್ವಚ್ಛತಾ ಕಾರ್ಯಗಳಂತಹ ಇಲಾಖೇತರ ಕೆಲಸಗಳಿಗೂ ಬಳಸಿಕೊಳ್ಳಲಾಗುತ್ತಿದೆ ಎಂದು ದೂರಿದರು.

ಚುನಾವಣಾ ಪೂರ್ವದಲ್ಲಿ ಘೋಷಿಸಲಾದ ಗ್ಯಾರಂಟಿ ಯೋಜನೆಗಳ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನ ಹೆಚ್ಚಿಸುವ ಭರವಸೆ ನೀಡಲಾಗಿತ್ತು. ಅದರಂತೆ ಕಾರ್ಯಕರ್ತೆಯರಿಗೆ ₹15,000 ಹಾಗೂ ಸಹಾಯಕಿಯರಿಗೆ ₹10,000 ಗೌರವಧನ ನೀಡಬೇಕು. 2011ರಿಂದ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೂ ಗ್ರಾಚ್ಯುಟಿ ನೀಡಬೇಕು. ಅಸೌಖ್ಯದ ಸಂದರ್ಭದಲ್ಲಿ ಯಾವುದೇ ಸೂಕ್ತ ಸಾಮಾಜಿಕ ಭದ್ರತೆ ಇಲ್ಲದಿರುವುದರಿಂದ ಇಎಸ್ಐ ವ್ಯಾಪ್ತಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.
ಕಳೆದ ಎರಡು-ಮೂರು ವರ್ಷಗಳಿಂದ ಗೌರವಧನ ಪಾವತಿಯಲ್ಲಿ ವಿಳಂಬವಾಗುತ್ತಿದ್ದು, ಎರಡು-ಮೂರು ತಿಂಗಳಿಗೊಮ್ಮೆ ಪಾವತಿಯಾಗುತ್ತಿದೆ. ಬಜೆಟ್ ಕೊರತೆಯ ಕಾರಣ ನೀಡಲಾಗುತ್ತಿದೆ. ಆದ್ದರಿಂದ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಗೌರವಧನ ಪಾವತಿಸುವ ವ್ಯವಸ್ಥೆ ಮಾಡಬೇಕು. ಗರ್ಭಿಣಿ ಮತ್ತು ಬಾಣಂತಿಯರಿಗೆ ವಿತರಿಸುವ ಮೊಟ್ಟೆಗಳ ದರದಲ್ಲಿ ವ್ಯತ್ಯಾಸವಾದ ಹಣವನ್ನು ಕಾರ್ಯಕರ್ತೆಯರೇ ಭರಿಸಬೇಕಾಗುತ್ತಿದೆ. ಹೀಗಾಗಿ ಮೊಟ್ಟೆ ಖರೀದಿಗೆ ನೀಡುವ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಬೇಕು ಎಂದು ಆಗ್ರಹಿಸಿದರು.

ಅಂಗನವಾಡಿ ಕಾರ್ಯವ್ಯಾಪ್ತಿಗೆ ಸಂಬಂಧಿಸದ ಇಲಾಖೇತರ ಕೆಲಸಗಳನ್ನು ನೀಡುವುದರಿಂದ ಮಕ್ಕಳ ಶಾಲಾಪೂರ್ವ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ಅಂಗನವಾಡಿ ಕೇಂದ್ರಗಳು ಆಹಾರ ವಿತರಿಸುವ ಕೇಂದ್ರಗಳಾಗಿ ಮಾತ್ರ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಾರ್ಯಕರ್ತೆಯರು ಹೆಚ್ಚಿನ ಸಮಯವನ್ನು ಕ್ಷೇತ್ರದಲ್ಲೇ ಕಳೆಯಬೇಕಾಗಿದೆ. ಆದ್ದರಿಂದ ಇಲಾಖೇತರ ಕೆಲಸಗಳಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ಮುಕ್ತಗೊಳಿಸಬೇಕು ಎಂದು ತಾರಾ ಬಲ್ಲಾಳ್ ಹೇಳಿದರು.
ಅಂಗನವಾಡಿ ಕೇಂದ್ರಗಳ ಸ್ವಚ್ಛತೆಗೆ ನೀಡಲಾಗುತ್ತಿದ್ದ ಸಾದಿಲ್ವಾರು ಹಣವನ್ನು ಸಮರ್ಪಕವಾಗಿ ಒದಗಿಸಬೇಕು. ಪೋಷಣ್ ಟ್ರ್ಯಾಕರ್ನಲ್ಲಿ ನಿರಂತರವಾಗಿ ಮಾಹಿತಿ ದಾಖಲಿಸಬೇಕಾಗಿರುವುದರಿಂದ ಪ್ರಸ್ತುತ ಮೊಬೈಲ್ಗಳಲ್ಲಿ ಕಾರ್ಯನಿರ್ವಹಿಸಲು ತೊಂದರೆಯಾಗುತ್ತಿದೆ. ಹೀಗಾಗಿ ಕಾರ್ಯಕರ್ತೆಯರಿಗೆ 5ಜಿ ಮೊಬೈಲ್ಗಳನ್ನು ವಿತರಿಸಬೇಕು. ಸರ್ಕಾರ ನೀಡುತ್ತಿರುವ ಸಮವಸ್ತ್ರದ ಮೊತ್ತಕ್ಕೆ ಗುಣಮಟ್ಟದ ಸಮವಸ್ತ್ರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ಹಾಗೂ ಪಂಚಾಯಿತಿ ಕಾರ್ಯಕ್ರಮಗಳಿಗೆ ಜನರನ್ನು ಕರೆತರುವ ಕೆಲಸಕ್ಕೂ ಅಂಗನವಾಡಿ ಕಾರ್ಯಕರ್ತೆಯರನ್ನು ಕಡ್ಡಾಯವಾಗಿ ಬಳಸಿಕೊಳ್ಳಲಾಗುತ್ತಿದೆ. ಪ್ರತಿ ಕಾರ್ಯಕ್ರಮಕ್ಕೂ ಇಂತಿಷ್ಟು ಜನರನ್ನು ಕರೆತರಬೇಕು ಎಂದು ಅಧಿಕಾರಿಗಳು ಸೂಚಿಸುತ್ತಿದ್ದು, ಇದರಿಂದ ಅಂಗನವಾಡಿ ಚಟುವಟಿಕೆಗಳು ಮತ್ತಷ್ಟು ಹಿನ್ನಡೆಯಾಗುತ್ತಿವೆ. ಜನರನ್ನು ಸೇರಿಸುವ ಕಾರ್ಯಕ್ಕೆ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳುವುದನ್ನು ಕೂಡಲೇ ನಿಲ್ಲಿಸಬೇಕು. ಮುಂದೆಯೂ ಈ ರೀತಿಯ ಒತ್ತಡ ಮುಂದುವರಿದರೆ, ಜನರನ್ನು ಕರೆತರಲು ಸೂಚಿಸುವ ಸ್ಥಳದಲ್ಲೇ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಅಂಗನವಾಡಿ ಕಾರ್ಯಕರ್ತೆಯರ ಮಾಸಿಕ ಸಭೆಗಳಲ್ಲಿ ಊಟದ ವೆಚ್ಚಕ್ಕಾಗಿ 50 ವರ್ಷಗಳ ಹಿಂದಿನಿಂದಲೂ ₹30 ನೀಡಲಾಗುತ್ತಿದೆ. ಇಂದಿನ ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ ₹30ಕ್ಕೆ ಯಾವುದೇ ಊಟದ ವ್ಯವಸ್ಥೆ ಸಾಧ್ಯವಿಲ್ಲ. ಆದ್ದರಿಂದ ಈ ಮೊತ್ತವನ್ನು ಕನಿಷ್ಠ ₹250ಕ್ಕೆ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಘದ ಕಾರ್ಯದರ್ಶಿ ಆಶಾಲತಾ, ಖಜಾಂಚಿ ರೇಣುಕಾ, ರಾಜ್ಯ ಸಂಘದ ಕೋಶಾಧಿಕಾರಿ ವಿಶಾಲಾಕ್ಷಿ, ಜಿಲ್ಲಾ ಸಂಘದ ಉಪಾಧ್ಯಕ್ಷೆ ಗುಲಾಬಿ, ನಗರ ಸಂಘದ ಶೀಲಾವತಿ ಹಾಗೂ ಬಂಟ್ವಾಳ ತಾಲೂಕು ಸಂಘದ ಅಧ್ಯಕ್ಷೆ ವಿಜಯವಾಣಿ ಉಪಸ್ಥಿತರಿದ್ದರು.


