ಮಂಗಳೂರು: ಮಂಗಳೂರು ಮೋಟಾರ್ ಸ್ಪೋರ್ಟ್ಸ್ ಅಸೋಸಿಯೇಶನ್ ವತಿಯಿಂದ ಭಾರತ್ ಪೆಟ್ರೋಲಿಯಂ ಆಟೋಕ್ರಾಸ್-2026 ಸ್ಪರ್ಧೆ ಅ.11ರಂದು ಕೂಳೂರಿನ ಗೋಲ್ಡ್ಫಿಂಚ್ ಸಿಟಿಯಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸುಧೀರ್ ಬಿ.ಕೆ. ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಕೊಡಗು, ಮೂಡುಬಿದಿರೆ ಹಾಗೂ ಕೇರಳ ಸೇರಿದಂತೆ ವಿವಿಧೆಡೆಯಿಂದ ಸುಮಾರು 120 ಚಾಲಕರು ಭಾಗವಹಿಸಲಿದ್ದು, 13 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದರು.

ಆಯೋಜನ ಸಮಿತಿಯ ಪ್ರಮುಖರಾದ ಅಶ್ವಿನ್ ನಾಯಕ್ ಮಾತನಾಡಿ, ಸುಮಾರು 1.1 ಕಿ.ಮೀ. ಉದ್ದದ ಸವಾಲಿನ ಟ್ರ್ಯಾಕ್ನಲ್ಲಿ ಸ್ಪರ್ಧೆ ನಡೆಯಲಿದ್ದು, ವೇಗದ ಮಹಿಳಾ ಚಾಲಕಿಗೆ ವಿಶೇಷ ಟ್ರೋಫಿ ನೀಡಲಾಗುವುದು. ಬೆಳಗ್ಗೆ 9ರಿಂದ ಸಾರ್ವಜನಿಕರಿಗೆ ಕಾರು ಪ್ರದರ್ಶನ ವೀಕ್ಷಿಸಲು ಅವಕಾಶವಿದ್ದು, ಸ್ಪರ್ಧೆಗೆ ಉಚಿತ ಪ್ರವೇಶವಿದೆ. ಸಾರ್ವಜನಿಕರು ಸುರಕ್ಷತೆಯ ದೃಷ್ಟಿಯಿಂದ ಟ್ರ್ಯಾಕ್ ಪ್ರವೇಶಿಸದಂತೆ ಮನವಿ ಮಾಡಿದರು.

ಮಂಗಳೂರು, ಉಡುಪಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಯುವಕರು ಸಾರ್ವಜನಿಕ ರಸ್ತೆಯಲ್ಲಿ ವೇಗದ ಚಾಲನೆ ಮಾಡುವ ಬದಲು ಇಂತಹ ಸುರಕ್ಷಿತ ಟ್ರ್ಯಾಕ್ನಲ್ಲಿ ತಮ್ಮ ಚಾಲನಾ ಕೌಶಲ್ಯ ಪ್ರದರ್ಶಿಸುವಂತೆ ಅವರು ಕರೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ವಿಕ್ರಂ ರಾವ್ ಹಾಗೂ ಹರೀಶ್ ಉಪಸ್ಥಿತರಿದ್ದರು

