42 ವರ್ಷದ ನಿಗೂಢತೆ ಮತ್ತೆ ಚರ್ಚೆಗೆ; ಸುಕುಮಾರ ಕುರುಪ್ ನಾಪತ್ತೆ ಪ್ರಕರಣದ ಧಾಕಲೆಗಳನ್ನು ಪರಿಶೀಲಿಸಿದ ಕ್ರೈಂ ಬ್ರಾಂಚ್

ತಿರುವನಂತಪುರಂ: ನಾಲ್ಕು ದಶಕಗಳಿಂದ ನಿಗೂಢವಾಗಿರುವ ಸುಕುಮಾರ ಕುರುಪ್ ನಾಪತ್ತೆ ಪ್ರಕರಣ ಮತ್ತೆ ಸುದ್ದಿಯಲ್ಲಿದೆ. ಈ ಪ್ರಕರಣದ ಧಾಕಲೆಗಳನ್ನು ಕ್ರೈಂ ಬ್ರಾಂಚ್ ಪರಿಶೀಲಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಆದರೆ, ಪ್ರಕರಣವನ್ನು ಮರು ತನಿಖೆ ನಡೆಸುವ ಉದ್ದೇಶದಿಂದ ಧಾಕಲೆಗಳನ್ನು ಪರಿಶೀಲಿಸಲಾಗಿಲ್ಲ ಎಂದು ಕ್ರೈಂ ಬ್ರಾಂಚ್ ಸ್ಪಷ್ಟಪಡಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಲ್ಕತ್ತಾದಲ್ಲಿ ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ಸುಕುಮಾರ ಕುರುಪ್ ಅವರನ್ನು ನೋಡಿದ್ದೇನೆ ಎಂದು ಹೇಳಿರುವ ಒಬ್ಬ ನರ್ಸ್ ಅವರ ಹೇಳಿಕೆಯನ್ನು ಕ್ರೈಂ ಬ್ರಾಂಚ್ ದಾಖಲಿಸಿದೆ. ಹಲವು ವರ್ಷಗಳ ಹಿಂದೆ ಪೊಲೀಸರಿಗೆ ಅವರು ಕಳುಹಿಸಿದ್ದ ಪತ್ರದ ಆಧಾರದ ಮೇಲೆ ಈ ಹೇಳಿಕೆ ದಾಖಲಿಸಲಾಗಿದೆ.ಆಲಪ್ಪುಳ ಕ್ರೈಂ ಬ್ರಾಂಚ್ ಡಿವೈಎಸ್ಪಿ ನೇತೃತ್ವದಲ್ಲಿ ನರ್ಸ್ ಅವರ ಹೇಳಿಕೆ ದಾಖಲಿಸಲಾಗಿದೆ.

42 ವರ್ಷಗಳ ಬಳಿಕ ಈ ಪ್ರಕರಣ ಮತ್ತೆ ಚರ್ಚೆಗೆ ಬಂದಿರುವ ಹಿನ್ನೆಲೆಯಲ್ಲಿ, ಪೊಲೀಸರು ತನಿಖೆಯನ್ನು ಪುನರಾರಂಭಿಸುತ್ತಾರೆಯೇ? ಸುಕುಮಾರ ಕುರುಪ್ ಕುರಿತು ಹೊಸ ಸುಳಿವು ಸಿಕ್ಕಿದೆಯೇ? ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿವೆ.

1984ರಲ್ಲಿ ಸಿನಿಮಾ ಪ್ರತಿನಿಧಿ ಚಾಕೋ ಹತ್ಯೆ ಪ್ರಕರಣದ ಬಳಿಕ ಸುಕುಮಾರ ಕುರುಪ್ ತಲೆಮರೆಸಿಕೊಂಡಿದ್ದರು. ನಂತರದ ವರ್ಷಗಳಲ್ಲಿ ಅವರು ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಹಲವು ಮಾಹಿತಿಗಳು ಪೊಲೀಸರಿಗೆ ಬಂದಿದ್ದರೂ, ಅವುಗಳ ಆಧಾರದ ಮೇಲೆ ನಡೆಸಿದ ಎಲ್ಲಾ ಶೋಧ ಕಾರ್ಯಗಳು ಫಲಕಾರಿಯಾಗಿರಲಿಲ್ಲ.

ಹಲವಾರು ವರ್ಷಗಳ ಕಾಲ ಮರೆವಿನಲ್ಲಿದ್ದ ಈ ಪ್ರಕರಣ, ಬಳಿಕ ದುಲ್ಕರ್ ಸಲ್ಮಾನ್ ಅಭಿನಯದ ‘ಕುರುಪ್’ ಚಿತ್ರದ ಬಿಡುಗಡೆಯ ನಂತರ ಮತ್ತೆ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಹಲವು ವರ್ಷಗಳ ಬಳಿಕ ಸುಕುಮಾರ ಕುರುಪ್ ಕುರಿತು ಮತ್ತೊಮ್ಮೆ ಹೊಸ ಬೆಳವಣಿಗೆ ಹೊರಬಿದ್ದಿರುವುದು ಗಮನ ಸೆಳೆಯುತ್ತಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!