ಕೋಟ್ಟಾಯಂ: ತ್ರಿಶೂರ್ ಪೂರಂ ಸೇರಿದಂತೆ ಕೇರಳದ ಹಲವು ಪ್ರಮುಖ ದೇವಾಲಯೋತ್ಸವಗಳಲ್ಲಿ ತನ್ನ ಗಂಭೀರ ನಡಿಗೆ ಹಾಗೂ ರಾಜಗಾಂಭೀರ್ಯದಿಂದ ಗಮನ ಸೆಳೆದಿದ್ದ ‘ಪಲ್ಲಾಟ್ ಬ್ರಹ್ಮದತ್ತನ್’ ಎಂಬ ಸಾಕಾನೆ ಸಿಡಿಲಿನ ಆಘಾತಕ್ಕೆ ಬಲಿಯಾಗಿದೆ. ಸುಮಾರು 45 ವರ್ಷ ವಯಸ್ಸಿನ ಬ್ರಹ್ಮದತ್ತನ್‌ನ ನಿಧನವು ಗಜಪ್ರಿಯರು ಹಾಗೂ ಉತ್ಸವ ಪ್ರಿಯರಲ್ಲಿ ತೀವ್ರ ದುಃಖ ಮೂಡಿಸಿದೆ.

ಈರಾಟ್ಟುಪೇಟ ನಿವಾಸಿ ರಾಜೇಶ್ ಪಲ್ಲಾಟ್ ಅವರ ಮಾಲೀಕತ್ವದ ಆನೆಯನ್ನು ಮನೆಯ ಆವರಣದಲ್ಲಿ ಕಟ್ಟಿಹಾಕಲಾಗಿತ್ತು. ಭಾನುವಾರ ಸಂಜೆ ಆನೆಗೆ ಸ್ನಾನ ಮಾಡಿಸುತ್ತಿದ್ದ ವೇಳೆ ಏಕಾಏಕಿ ಸಿಡಿಲಿನ ಆಘಾತ ಸಂಭವಿಸಿದೆ. ತೀವ್ರ ಆಘಾತಕ್ಕೆ ಒಳಗಾದ ಬ್ರಹ್ಮದತ್ತನ್ ಸ್ಥಳದಲ್ಲೇ ಕುಸಿದುಬಿದ್ದಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪಶುವೈದ್ಯರು ಪರಿಶೀಲನೆ ನಡೆಸಿ ಆನೆ ಮೃತಪಟ್ಟಿರುವುದನ್ನು ದೃಢಪಡಿಸಿದರು.
ತ್ರಿಶೂರ್ ಪೂರಂ ಮಾತ್ರವಲ್ಲದೆ ಕೇರಳದ ವಿವಿಧ ದೇವಾಲಯೋತ್ಸವಗಳಲ್ಲೂ ಬ್ರಹ್ಮದತ್ತನ್ ನಿಯಮಿತವಾಗಿ ಭಾಗವಹಿಸುತ್ತಿತ್ತು. ಉತ್ಸವಗಳಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಈ ಗಜರಾಜನ ಅಗಲಿಕೆಯ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಹಾಗೂ ಗಜಪ್ರಿಯರಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.

ಅರುಣಾಚಲ ಪ್ರದೇಶದ ಅರಣ್ಯ ಪ್ರದೇಶದಿಂದ ಕೇರಳಕ್ಕೆ ತರಲಾಗಿದ್ದ ಬ್ರಹ್ಮದತ್ತನ್ ಹಲವು ವರ್ಷಗಳಿಂದ ದೇವಾಲಯೋತ್ಸವಗಳ ಅವಿಭಾಜ್ಯ ಅಂಗವಾಗಿತ್ತು. ಆನೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಶುವೈದ್ಯರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಸೋಮವಾರ ಆನೆಯ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಆನೆಯ ದಂತ ಹಾಗೂ ನಖಗಳನ್ನು ಸಂಗ್ರಹಿಸಲಿದ್ದಾರೆ. ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಅಂತ್ಯಸಂಸ್ಕಾರ ನಡೆಸಲಾಗುವುದು.
ಉತ್ಸವಗಳ ಕಳೆ ಹೆಚ್ಚಿಸಿದ್ದ ಬ್ರಹ್ಮದತ್ತನ್‌ನ ರಾಜಗಾಂಭೀರ್ಯದ ಹೆಜ್ಜೆಗಳು ಇನ್ನು ನೆನಪು ಮಾತ್ರ. ಗಜಪ್ರಿಯರ ಮನದಲ್ಲಿ ಈ ಗಜರಾಜನ ನೆನಪು ಸದಾ ಉಳಿಯಲಿದೆ.

