ಸಂಕಷ್ಟದ ಸಾಥಿಗೆ ಕೃತಜ್ಞತೆಯ ಹರಕೆ: ಕೇರಳದ ಅರ್ಜುನನ ತಾಯಿಯಿಂದ ಮಂಜೇಶ್ವರದ ಅಭ್ಯರ್ಥಿಗೆ ‘ಗೆಲುವಿನ ಇಡುಗಂಟು

ಮಂಜೇಶ್ವರ: ರಾಜಕೀಯದ ಆಚೆಗೂ ಮಾನವೀಯ ಸಂಬಂಧಗಳು ಎಷ್ಟು ಗಾಢವಾಗಿರುತ್ತವೆ ಎಂಬುದಕ್ಕೆ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್ ಹಾಗೂ ಶಿರೂರು ಭೂಕುಸಿತದಲ್ಲಿ ಮೃತಪಟ್ಟ ಲಾರಿ ಚಾಲಕ ಅರ್ಜುನ್ ಕುಟುಂಬದ ನಡುವಿನ ಭೇಟಿ ಸಾಕ್ಷಿಯಾಗಿದೆ.

​ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಲಾರಿ ಸಹಿತ ಗಂಗಾವಳಿ ನದಿ ಪಾಲಾಗಿದ್ದ ಅರ್ಜುನನ ಪತ್ತೆಗಾಗಿ ನಡೆದ ಸುದೀರ್ಘ 70ಕ್ಕೂ ಹೆಚ್ಚು ದಿನಗಳ ಕಾರ್ಯಾಚರಣೆಯ ವೇಳೆ, ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವೆ ಸೇತುವೆಯಂತೆ ನಿಂತು ಅಶ್ರಫ್ ಶ್ರಮಿಸಿದ್ದರು. ಆ ಕರುಣಾಜನಕ ದಿನಗಳಲ್ಲಿ ಅರ್ಜುನ್ ಕುಟುಂಬದ ಜೊತೆಗಿದ್ದ ಅಶ್ರಫ್, ಈಗ ತಮ್ಮ ಚುನಾವಣಾ ಕಣಕ್ಕೆ ಅರ್ಜುನನ ತಾಯಿಯ ಆಶೀರ್ವಾದದೊಂದಿಗೆ ಹೆಜ್ಜೆ ಇಟ್ಟಿದ್ದಾರೆ.

​ತಮ್ಮ ನಾಮಪತ್ರ ಸಲ್ಲಿಕೆಗೆ ಮುನ್ನ ಪಾಣಕ್ಕಾಡ್ ತಂಙಳ್ ಅವರ ಆಶೀರ್ವಾದ ಪಡೆದು ಮರಳುತ್ತಿದ್ದ ಎಕೆಎಂ ಅಶ್ರಫ್, ಕೋಝಿಕೋಡ್‌ನ ಕನ್ನಾಡಿಕ್ಕಲ್‌ನಲ್ಲಿರುವ ಅರ್ಜುನನ ಮನೆಗೆ ಭೇಟಿ ನೀಡಿದರು. ಈ ವೇಳೆ ಮಗನನ್ನು ಕಳೆದುಕೊಂಡ ನೋವಿನ ನಡುವೆಯೂ, ಸಂಕಷ್ಟದ ಸಮಯದಲ್ಲಿ ನೆರವಾಗಿದ್ದ ಅಶ್ರಫ್ ಅವರ ಬಗ್ಗೆ ಕಿಂಚಿತ್ತೂ ಪ್ರೀತಿ ಕಡಿಮೆ ಮಾಡದ ಅರ್ಜುನನ ತಾಯಿ ಶೀಲಾ, ತಮ್ಮ ಮಗನ ಸ್ಮರಣೆಯಂತೆ ಅಶ್ರಫ್ ಅವರಿಗೆ ಚುನಾವಣಾ ಇಡುಗಂಟನ್ನು (Deposit Amount) ಹಸ್ತಾಂತರಿಸಿ ಭಾವುಕರಾಗಿ ಆಶೀರ್ವದಿಸಿದರು.

ಶಿರೂರು ನದಿಯಲ್ಲಿ ಅರ್ಜುನನ ಪತ್ತೆಗಾಗಿ ಸುಮಾರು ಒಂದೂವರೆ ತಿಂಗಳ ಕಾಲ ನಡೆದ ಕಾರ್ಯಾಚರಣೆಯ ಪ್ರತಿ ಹಂತದಲ್ಲೂ ಅಶ್ರಫ್ ಸ್ಥಳದಲ್ಲಿದ್ದು ಕುಟುಂಬಕ್ಕೆ ಧೈರ್ಯ ತುಂಬಿದ್ದರು.
​ಸೇತುವೆಯಾಗಿ ಅಶ್ರಫ್: ಕರ್ನಾಟಕ ಸರ್ಕಾರದ ಅಧಿಕಾರಿಗಳು ಮತ್ತು ಕೇರಳದ ಕುಟುಂಬದ ನಡುವೆ ಸಂವಹನಕಾರರಾಗಿ ಕೆಲಸ ಮಾಡಿದ್ದ ಅಶ್ರಫ್ ಅವರ ಕಾರ್ಯವನ್ನು ಕೇರಳದ ಮಾಧ್ಯಮಗಳು ಶ್ಲಾಘಿಸಿದ್ದವು.

ಅರ್ಜುನನ ಅಸ್ಥಿ ಅವಶೇಷಗಳು ಪತ್ತೆಯಾದ ನಂತರ, ಅಂತಿಮ ಸಂಸ್ಕಾರದವರೆಗೂ ಕುಟುಂಬದ ಜೊತೆಗಿದ್ದ ಅಶ್ರಫ್, ಇಂದಿಗೂ ಆ ಮನೆಯ ಸದಸ್ಯನಂತೆಯೇ ಉಳಿದಿದ್ದಾರೆ.
​ರಾಜಕೀಯ ಮೇಲಾಟಗಳ ನಡುವೆ ಈ “ಇಡುಗಂಟು” ಕೇವಲ ಹಣವಾಗಿರದೆ, ಒಬ್ಬ ಜನಪ್ರತಿನಿಧಿ ಜನರ ಕಷ್ಟ ಕಾಲದಲ್ಲಿ ಜೊತೆಗಿದ್ದಾಗ ಸಿಗುವ ಅಪ್ಪಟ ಪ್ರೀತಿ ಮತ್ತು ಗೌರವಕ್ಕೆ ಸಾಕ್ಷಿಯಾಗಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!