ಕಾಸರಗೋಡು: ಮಲಗಿದ್ದ 16ರ ಹರೆಯದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಯುವತಿಯನ್ನು ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ.ಬಂಧಿತೆಯನ್ನು ತಳಿಪರಂಬದ ಪುಳಿಪರಂಬ್ ನಿವಾಸಿ ಸ್ನೇಹಾ ಮೇರ್ಲಿ (25) ಎಂದು ಗುರುತಿಸಲಾಗಿದೆ.

ಮೇಲ್ಪರಂಬ ಎಸ್‌ಐ ನೇತೃತ್ವದ ಪೊಲೀಸ್ ತಂಡ ಬಂಧನ ಕಾರ್ಯಾಚರಣೆ ನಡೆಸಿತು. ಈಗಾಗಲೇ ಐದು ಪೋಕ್ಸೋ ಪ್ರಕರಣಗಳಲ್ಲಿ ಆರೋಪಿಯಾಗಿರುವ ಸ್ನೇಹಾ, ಸಂಬಂಧಿಕರ ಮನೆಯಲ್ಲಿ ಅಡಗಿಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ 16ರ ಹರೆಯದ ಬಾಲಕಿಯ ಮೇಲೆ ಲೈಂಗಿಕ ಶೋಷಣೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ನಡೆದಿದೆ. ಬಾಲಕಿಯ ತಾಯಿ ಹಾಗೂ ಆರೋಪಿ ಸ್ನೇಹಿತೆಯರಾಗಿದ್ದು, ಈ ಪರಿಚಯದ ಹಿನ್ನೆಲೆಯಲ್ಲಿ ಸ್ನೇಹಾ ಬಾಲಕಿಯ ಕುಟುಂಬದ ಮನೆಯಲ್ಲಿ ವಾಸವಾಗಿದ್ದಳು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


