ಮಂಜೇಶ್ವರ: ಅಪಘಾತಕ್ಕೀಡಾಗಿ ರಸ್ತೆ ಬದಿಯಲ್ಲಿದ್ದ ಬೈಕನ್ನು ಕದ್ದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೀಂಜ ಸಂತಡ್ಕ ನಿವಾಸಿ ಮುಹಮ್ಮದ್ ಅಲಿಯಾಸ್ ಮುನ್ನ (21) ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಮೇ 1ರಂದು ಉಪ್ಪಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಂ.ಎನ್. ಸಂತೋಷ್ ಎಂಬವರ ಬೈಕ್ ಅಪಘಾತಕ್ಕೀಡಾಗಿತ್ತು. ಗಾಯಗೊಂಡಿದ್ದ ಸಂತೋಷ್ ಆಸ್ಪತ್ರೆಗೆ ದಾಖಲಾಗಿದ್ದರು. ಚೇತರಿಸಿಕೊಂಡು ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈತನ ಮೇಲೆ ಈಗಾಗಲೇ ಮಂಜೇಶ್ವರ ಠಾಣೆಯಲ್ಲಿ ಪೋಕ್ಸೊ ಪ್ರಕರಣ ಹಾಗೂ ಬೇಕಲ ಠಾಣೆಯಲ್ಲಿ ಕಳ್ಳತನದ ಕೇಸುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.