ಗಡಿನಾಡಿನಲ್ಲಿ ಕನ್ನಡ ಗ್ರಾಮದ ಪರಿಕಲ್ಪನೆ ಅಭಿನಂದನೀಯ: ಎಲ್.ಜಿ. ಜ್ಯೋತಿಶ್ವರ

ಕಾಸರಗೋಡು, ಜೂನ್ 5: ಕರ್ನಾಟಕದೊಳಗೆ ಎಲ್ಲಿಯೂ ಕಾಣಸಿಗದ ವಿಶಿಷ್ಟ ಕನ್ನಡ ಗ್ರಾಮ ಗಡಿನಾಡು ಕಾಸರಗೋಡಿನಲ್ಲಿ ನಿರ್ಮಾಣಗೊಂಡಿದ್ದು, ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಗಳಿಗೆ ಆಶ್ರಯಧಾಮವಾಗಿ ಬೆಳೆದಿರುವುದು ಅಭಿನಂದನೀಯ ಎಂದು ಅಂತರರಾಷ್ಟ್ರೀಯ ಖ್ಯಾತಿಯ ಜಾಹೀರಾತು ಹಾಗೂ ವೈದ್ಯಕೀಯ ಸಂವಹನ ತಜ್ಞ ಎಲ್.ಜಿ. ಜ್ಯೋತಿಶ್ವರ ಅಭಿಪ್ರಾಯಪಟ್ಟರು.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಹಾಗೂ ಅಧ್ಯಕ್ಷ ಶಿವರಾಮ ಕಾಸರಗೋಡು ಅವರನ್ನು ಭೇಟಿ ಮಾಡಲು ಕನ್ನಡ ಗ್ರಾಮಕ್ಕೆ ಆಗಮಿಸಿದ್ದ ಜ್ಯೋತಿಶ್ವರ ದಂಪತಿಯನ್ನು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಕೇರಳ ರಾಜ್ಯ ಘಟಕದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜ್ಯೋತಿಶ್ವರ, “ಕಾಸರಗೋಡು ಬಹುಭಾಷಾ ಸಂಸ್ಕೃತಿಯ ನಾಡು. ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ. ಭಾಷೆಗಳ ನಡುವೆ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಆಂಗ್ಲ ಭಾಷೆಯ ವ್ಯಾಮೋಹವನ್ನು ಬದಿಗಿಟ್ಟು ಮಾತೃಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದು ಹೇಳಿದರು.

ಕವಿ ಹಾಗೂ ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅಭಿನಂದನಾ ನುಡಿಗಳನ್ನಾಡಿದರು. ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಕೆ. ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರು ಜೈನ್ ಕಾಲೇಜಿನ ಇಂಗ್ಲಿಷ್ ವಿಭಾಗದ ನಿವೃತ್ತ ಮುಖ್ಯಸ್ಥೆ ರಂಜಿನಿ ಜ್ಯೋತಿಶ್ವರ ಅವರನ್ನು ಸಹ ಗೌರವಿಸಲಾಯಿತು. ಕೆ. ಕುಶಲಕುಮಾರ್ ಶುಭ ಹಾರೈಸಿದರೆ, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಕೆ. ಜಗದೀಶ್ ಕೂಡ್ಲು ವಂದಿಸಿದರು.

ಕನ್ನಡ ನಿಘಂಟಿನ ಪ್ರಥಮ ಸಂಪಾದಕ ಹಾಗೂ ಬಹುಭಾಷಾ ಪಂಡಿತ ಎಲ್. ಗುಂಡಪ್ಪ ಅವರ ಪುತ್ರರಾಗಿರುವ ಎಲ್.ಜಿ. ಜ್ಯೋತಿಶ್ವರ ಅವರು ಜಾಹೀರಾತು ಮತ್ತು ವೈದ್ಯಕೀಯ ಸಂವಹನ ಕ್ಷೇತ್ರಗಳಲ್ಲಿ 57 ವರ್ಷಗಳ ಅನುಭವ ಹೊಂದಿದ್ದಾರೆ. ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಐದು ಸಾವಿರಕ್ಕೂ ಅಧಿಕ ಸಾಕ್ಷ್ಯಚಿತ್ರಗಳು, ನುಡಿಚಿತ್ರಗಳು ಹಾಗೂ ಜಾಹೀರಾತುಗಳಿಗಾಗಿ ಸಾಹಿತ್ಯ ರಚಿಸಿರುವ ಖ್ಯಾತಿ ಅವರದ್ದಾಗಿದೆ.

ಈ ವೇಳೆ ಮಹತ್ವದ ಘೋಷಣೆ ಮಾಡಿದ ಜ್ಯೋತಿಶ್ವರ, 2026ರ ನವೆಂಬರ್ 7 ಮತ್ತು 8ರಂದು ಕನ್ನಡ ಗ್ರಾಮದಲ್ಲಿ ನಡೆಯಲಿರುವ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ ಹಾಗೂ ಕೇರಳ–ಕರ್ನಾಟಕ ಉತ್ಸವಕ್ಕೆ ಬೆಂಗಳೂರಿನ ವಿವಿಧ ಸಂಘ-ಸಂಸ್ಥೆಗಳು ಮತ್ತು ಟ್ರಸ್ಟ್‌ಗಳ ಮೂಲಕ ಆರ್ಥಿಕ ನೆರವು ಒದಗಿಸಲಾಗುವುದು ಎಂದು ತಿಳಿಸಿದರು.

ಅಲ್ಲದೆ, ಕನ್ನಡ ಗ್ರಾಮದಲ್ಲಿ ಸುಮಾರು 6 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ‘ಕೇರಳ–ಕರ್ನಾಟಕ ಭವನ’ ಸಾಂಸ್ಕೃತಿಕ ಸಮುಚ್ಚಯ ಯೋಜನೆ ಕುರಿತು ಕರ್ನಾಟಕ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಗತ್ಯ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!